ಹನುಮ ಜಯಂತ್ಯುತ್ಸವಕ್ಕೆ ಚಾಲನೆ

HUN-DEC-13-6(HANUMA JAYANTHI)
ಹುಣಸೂರು ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹನುಮಜಯಂತಿ ಆಂಗವಾಗಿ ಆಂಜನೇಯಸ್ವಾಮಿ ಮೂರ್ತಿಯ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಶ್ರೀ ನಟರಾಜಸ್ವಾಮೀಜಿ, ಶ್ರೀ ಸಾಂಬಸದಾಶಿವಸ್ವಾಮೀಜಿ, ಎಚ್.ಪಿ.ಮಂಜುನಾಥ್, ವಿ.ಎನ್.ದಾಸ್, ಬಿ.ಎಸ್.ಯೋಗಾನಂದಕುಮಾರ್, ಅಪ್ಪಣ್ಣ, ಕುಮಾರ್ ಇತರು ಇದ್ದರು.
Published on

ಹುಣಸೂರು: ಹುಣಸೂರಿನ ಹನುಮಂತ್ಯುತ್ಸವ ಸಮಿತಿ ಮತ್ತು ಹಿಂದು ಪರ ಸಂಘಟನೆಗಳು ಆಯೋಜಿಸಿರುವ 30ನೇ ವರ್ಷದ ಹನುಮ ಜಯಂತಿ ಅಂಗವಾಗಿ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಂಜನೇಯಸ್ವಾಮಿ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಜಯಂತ್ಯುತ್ಸವಕ್ಕೆ ಚಾಲನೆ ನೀಡಲಾಯಿತು.

ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಬೃಹದಾಕಾರದ ಆಂಜನೇಯಸ್ವಾಮಿ ದೇವರ ಮೂರ್ತಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿದ ನಂತರ ದೇವಾಲಯದಿಂದ ಮುನೇಶ್ವರ ಕಾವಲ್ ಮೈದಾನದವರೆಗೆ ಮೆರವಣಿಗೆ ಮೂಲಕ ಆಂಜನೇಯಸ್ವಾಮಿ, ಸೀತಾಮಾತೆಯನ್ನೊಳಗೊಂಡ ಶ್ರೀರಾಮ ಲಕ್ಷ್ಮಣರ ಪಂಚಲೋಹದ ಮೂರ್ತಿಯೊಂದಿಗೆ ಕರೆತರಲಾಯಿತು.

ಮೆರವಣಿಗೆ ದೇವಾಲಯದಿಂದ ಮೈಸೂರು-ಹುಣಸೂರು ಮುಖ್ಯರಸ್ತೆಯ ಕಲ್ಪತರು ವೃತ್ತ, ಸರಸ್ವತಿಪುರಂ ಮೂಲಕ ವಿಶ್ವೇಶ್ವರಯ್ಯ ವೃತ್ತ, ಗಣೇಶನಗುಡಿ ಬೀದಿ, ಬ್ರಾಹ್ಮಣರ ಬೀದಿಯಿಂದ ಮುನೇಶ್ವರ ಕಾವಲ್ ಮೈದಾನದಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಮನೆಗಳ ಮುಂದೆ ಪೂಜೆ ಸಲ್ಲಿಸಿ ನಮಿಸಿದರು.

ದೇವಾಲಯದ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಗಾವಡಗೆರೆ ಶ್ರೀ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜಸ್ವಾಮೀಜಿ ಮಾತನಾಡಿ, ಆಂಜನೇಯಸ್ವಾಮಿ ಜಯಂತಿ ತಾಲೂಕಿನ ಜನರ ಬದುಕಿಗೆ ಸಂತೋಷ, ಅಭಿವೃದ್ಧಿ, ನೆಮ್ಮದಿಯ ಸಂಕೇತವಾಗಿ ನಡೆದುಕೊಂಡು ಬಂದಿದೆ. ಮೈಸೂರಿನ ನಾಡಹಬ್ಬ ದಸರಾ ಉತ್ಸವದಂತೆ ಹುಣಸೂರಿನ ಸಮಸ್ತ ಜನರು ಹನುಮ ಜಯಂತಿ ಆಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.

ಹನುಮನ ಆಶೀರ್ವಾದದೊಂದಿಗೆ ತಾಲೂಕಿನ ಸಮಸ್ತ ಜನರಿಗೆ ಶುಭವಾಗಲಿ ಎಂದು ಹಾರೈಸಿದರು. ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿದರು. ಹನುಮಂತ್ಯುತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಬಿ.ಎಸ್.ಯೋಗಾನಂದಕುಮಾರ್, ಅನಿಲ್, ಅಪ್ಪಣ್ಣ, ಸುಬ್ಬರಾವ್, ಡಿ.ಕೆ.ಕುನ್ನೇಗೌಡ, ವರದರಾಜ ಪಿಳ್ಳೆ, ಕೃಷ್ಣ, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net