

ವಿಜಯಪುರ: ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಮೂಲಾಗಿದ್ದ ಭೂತನಾಳ ಕೆರೆ ಮಳೆ ಅಭಾವದಿಂದ ಬತ್ತಿ ಹೋಗಿತ್ತು. ಇದೀಗ ಕೃಷ್ಣಾ ನದಿ ನೀರಿನಿಂದ ಭೂತನಾಳ, ಬೇಗಂ ತಲಾಬ್ ಮತ್ತು ಮಮದಾಪುರ ಕೆರೆ ತುಂಬಿಸುವ ಕಾರ್ಯ ಚಾಲನೆಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಅಮೃತ ಯೋಜನೆಯಡಿ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮಳೆ ಅಭಾವದಿಂದ ಜು. 20 ರ ಹೊತ್ತಿಗೆ ಬತ್ತಿಹೋಗಿದ್ದ ಭೂತನಾಳ ಕೆರೆಯಲ್ಲಿ ನೀರು ಡೆಡ್ ಸ್ಟೋರೇಜ್‌ಗಿಂತಲೂ ಕಡಿಮೆಯಾಗಿತ್ತು. ಕೆರೆ ನೀರನ್ನು ನಗರದ ಭೂತನಾಳ ಗ್ರಾಮ, ಎಂ.ಬಿ.ಪಾಟೀಲ ನಗರ, ಆದರ್ಶನಗರ, ಆಶ್ರಮ, ಬಿ.ಎಂ.ಪಾಟೀಲ ನಗರ, ವಿಜಯ ಕಾಲೇಜ್, ಕೆ.ಎಚ್.ಬಿ ಕಾಲನಿ, ಚಾಲುಕ್ಯನಗರದವರೆಗಿನ 13 ಸಾವಿರ ಮನೆಗಳಿಗೆ ಪೂರೈಸಲಾಗುತ್ತಿತ್ತು.
ಅಂದಾಜು 75 ಸಾವಿರಕ್ಕೂ ಹೆಚ್ಚು ಜನರಿಗೆ ಕೆರೆಯಿಂದ ನಿರಂತರ ನೀರು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಅರಿತ ಅಧಿಕಾರಿಗಳು 10-15 ದಿನಗಳಿಗೊಮ್ಮೆ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಮಾಹಿತಿ ದೊರೆತ ಮೇಲೆ ಆಲಮಟ್ಟಿ ಜಲಾಶಯ ನೀರನ್ನು ಬಳಸಿ ಕೆರೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ಲಿಂಗದಳ್ಳಿ ಬಳಿ ಕೃಷ್ಣಾ ನದಿಯಲ್ಲಿರುವ ಜಾಕ್‌ವೆಲ್‌ನಲ್ಲಿ ಎರಡು ಮೋಟಾರ್ ಮೂಲಕ ನೀರು ಎತ್ತಿ ಐತಿಹಾಸಿಕ ಕೆರೆಗಳಾದ ಮಮದಾಪುರ, ಬೇಗಂ ತಾಲಾಬ್ ಮತ್ತು ಭೂತನಾಳ ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.