

ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಮಂಗಳವಾರ ಚಾಲನೆ ದೊರೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ನೌಕರರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ನಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಈ ವೇದಿಕೆ ಅವಕಾಶ ಮಾಡಿಕೊಟ್ಟಿದೆ. ನಾವು ಆರೋಗ್ಯದಿಂದ ಇದ್ದರೆ ಇನ್ನಷ್ಟು ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್.ಪೂರ್ಣಿಮಾ ಮಾತನಾಡಿ, ಎರಡು ವರ್ಷಗಳಿಂದ ಕೋವಿಡ್ ಇದ್ದ ಕಾರಣ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಕೋವಿಡ್ ಮುಗಿದ ನಂತರ ಇದು ಎರಡನೇ ಕ್ರೀಡಾಕೂಟವಾಗಿದೆ. ಸ್ಪರ್ಧಾ ಮನೋಭಾವದಿಂದ ಪ್ರತಿಯೊಬ್ಬರೂ ಭಾಗವಹಿಸಿ ಎಂದು ತಿಳಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಒಂದಷ್ಟು ವಿಕಸನ ಮತ್ತು ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನವಾಗಿದೆ. ವಿಶೇಷವಾಗಿ ದೈಹಿಕವಾಗಿ ಯಾವಾಗ ನಾವು ಸಮರ್ಥರಾಗಿರುತ್ತೇವೆಯೋ ಆಗ ಮಾನಸಿಕವಾಗಿಯೂ ಸದೃಢರಾಗಿರುತ್ತೇವೆ. ಎಷ್ಟೇ ಒತ್ತಡವಿದ್ದರೂ ಸಮಚಿತ್ತದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಉಪ ಮೇಯರ್ ಜಿ.ರೂಪಾ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೊಂವಿದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಇತರರಿದ್ದರು. ಇದೇ ವೇಳೆ ಕ್ರೀಡಾಪಟುಗಳ ಪಥ ಸಂಚಲನ ಗಮನ ಸೆಳೆಯಿತು.
ಎರಡು ದಿನ ಕ್ರೀಡಾಕೂಟ: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿಶ್ವ ವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್, ಜೆಪಿ ನಗರದ ಮಹರ್ಷಿ ಶಾಲೆ, ಕುವೆಂಪುನಗರದ ಕನ್ನೇಗೌಡ ಕ್ರೀಡಾಂಗಣದಲ್ಲಿ ಡಿ.21ರವರೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಹಾಕಿ, ಕುಸ್ತಿ, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್‌ಬಾಲ್, ಅಥ್ಲೆಟಿಕ್ಸ್, ಟೆನಿಕಾಯ್ಟ, ವೇಯ್ಟಲಿಫ್ಟಿಂಗ್, ಪವರ್‌ಲಿಫ್ಟಿಂಗ್, ಬೆಸ್ಟ್ ಫಿಸಿಕ್, ಚೆಸ್, ಥ್ರೋಬಾಲ್, ಈಜು, ಕೇರಂ, ಬಾಲ್ ಬ್ಯಾಡ್ಮಿಂಟನ್, ಟೆನಿಸ್, ಫುಟ್ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಹಾಗೂ ಕ್ರಿಕೆಟ್ ಕ್ರೀಡೆಗಳು ನಡೆಯಲಿವೆ.
ಡಿ.21ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.