ದೂರ ತರಂಗ ಆನ್‌ಲೈನ್ ಶಿಕ್ಷಣಕ್ಕೆ ಚಾಲನೆ; ಮೊದಲ ಹಂತದಲ್ಲಿ 21 ಶಾಲೆಗಳಲ್ಲಿ ಪ್ರಯೋಗ ; ಬೋಧನೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

09_Madhugiri_Minister_01
Published on

ಮಧುಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ದೂರ ತರಂಗ ಶಿಕ್ಷಣ' ಕಾರ್ಯಕ್ರಮಕ್ಕೆ ಮಧುಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಚಾಲನೆ ನೀಡಿದರು. ಇದೇ ಶಾಲೆಯ ಹಿರಿಯ ವಿದ್ಯಾರ್ಥಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಸಾಕ್ಷಿಯಾದರು.

ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಷನ್, ಸಮರ್ಪಣಾ ಇನ್ಫೋಸಿಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಸಚಿವರು, ನಾನು ಶಿಕ್ಷಣ ಸಚಿವನಲ್ಲ, ರಾಜ್ಯದ ಎಲ್ಲ ವಿದ್ಯಾರ್ಥಿಗಳ ಪೋಷಕ, ಅವರ ಯೋಗಕ್ಷೇಮ ಮತ್ತು ಶೈಕ್ಷಣಿಕ ಜೀವನ ಎರಡೂ ನನಗೆ ಮುಖ್ಯ ಎಂದರು.

ಕರೊನಾ ಸಂಕಷ್ಟದಿಂದಾಗಿ ಆನ್‌ಲೈನ್ ಶಿಕ್ಷಣ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ, ಇದನ್ನು ಮನಗಂಡು ಇನ್ಫೋಸಿಸ್ ದಿಗ್ಗಜ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಸಹಕಾರದಲ್ಲಿ ಸ್ವಾಮಿ ಜಪಾನಂದಜೀ ನೇತೃತ್ವದಲ್ಲಿ ಗ್ರಾಮಾಂತರ ಪ್ರದೇಶದ 21 ಶಾಲೆಗಳಲ್ಲಿ ಮೊದಲ ಹಂತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ ಗುಣಮಟ್ಟದ ಆನ್‌ಲೈನ್ ಶಿಕ್ಷಣ ನೀಡಲಾಗುವುದು ಎಂದರು.

ಈ ಯೋಜನೆ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೀಮಿತವಾಗದೆ ರಾಜ್ಯಾದ್ಯಂತ ವಿಸ್ತರಿಸುವಂತಾಗಬೇಕು ಎಂಬ ಆಶಯವಿದೆ, ಎಲ್ಲ ಚಟುವಟಿಕೆಗಳು ಆರಂಭವಾಗಿದ್ದರೂ ಶಾಲೆಗಳು ಆರಂಭವಾಗದಿದ್ದರೆ ಹೇಗೆ ಎಂದು ನಾರಾಯಣ ಮೂರ್ತಿ ಅವರು ಪ್ರಶ್ನಿಸಿದ್ದು, ಇದು ಅವರ ಶಿಕ್ಷಣ ಪ್ರೇಮವನ್ನು ತೋರಿಸುತ್ತದೆ ಎಂದು ಪ್ರಶಂಸಿದರು.

ಕರೊನಾ ಸಂಕಷ್ಟದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ ಎಂದು ವಿವರಿಸಿದಾಗ ದೂರ ತರಂಗ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಹೃದಯ ವೈಶಾಲ್ಯತೆಯನ್ನು ರಾಮಕೃಷ್ಣ

ಆಶ್ರಮದ ಜಪಾನಂದಜೀ ಶ್ಲಾಘಿಸಿದರು.

ತಹಸೀಲ್ದಾರ್ ಡಾ.ಜಿ ವಿಶ್ವನಾಥ್ ಮಾತನಾಡಿದರು. ಎಸಿ ಸೋಮಪ್ಪ ಎಂ.ಕಡಕೋಳ್, ಸಮಗ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ, ಡಿಡಿಪಿಐ ಎಂ.ರೇವಣಸಿದ್ದಪ್ಪ, ಸಿ.ನಂಜಯ್ಯ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಸಚಿವರು ತಾಲೂಕಿನ ಡಿ.ವಿ.ಹಳ್ಳಿ ಸರ್ಕಾರಿ ಪ್ರೌಢಶಾಲೆ , ದಬ್ಬೇಗಟ್ಟ ಸರ್ಕಾರಿ ಪ್ರೌಢಶಾಲೆ , ದೊಡ್ಡೇರಿ ಸರ್ಕಾರಿ ಪಾಠಶಾಲೆ, ದಂಡಿನದಿಬ್ಬ ಶ್ರೀಸಿದ್ಧಾರ್ಥ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ ತರಗತಿ ಪರಿಶೀಲಿಸಿದರು.

ನಾನು ಓದಿದ ಶಾಲೆಗೆ 5 ದಶಕಗಳ ನಂತರ ಬಂದು ವೇದಿಕೆಯಲ್ಲಿ ನನ್ನ ಗೆಳೆಯನ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಾರಾಯಣಮೂರ್ತಿ ಹಿಮಾಲಯದ ಎತ್ತರಕ್ಕೆ ಬೆಳೆದಿದ್ದು, ಇವರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕವನ್ನಾಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಲಿದೆ. ಡಾ.ದೊಡ್ಡರಂಗೇಗೌಡ ಮಧುಗಿರಿ ಸರ್ಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ, ಸಾಹಿತಿ ಉತ್ತಮ ಶಿಕ್ಷಣದಿಂದ ಮಾತ್ರ ಗುಣಾತ್ಮಕ ಸಮಾಜ ನಿರ್ಮಾಣ ಸಾಧ್ಯ. ಉನ್ನತ ಶಿಕ್ಷಣ ಪಡೆಯುವ ವ್ಯಕ್ತಿಯಲ್ಲಿ ಸಮಾಜಮುಖಿ ಚಿಂತನೆಗಳು ಮೊಳೆಯುತ್ತವೆ. ನಾನು ಓದಿ ಬೆಳೆದ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ 21 ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುತ್ತಿರುವುದು ಗ್ರಾಮಾಂತರ ಭಾಗದ ಮಕ್ಕಳಿಗೆ ವರದಾನವಾಗಿದೆ. ಎನ್.ಆರ್.ನಾರಾಯಣ ಮೂರ್ತಿ ಇನ್ಫೋಸಿಸ್ ಸಂಸ್ಥಾಪಕ (ಆನ್‌ಲೈನ್ ಭಾಷಣ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net