ಹೊರ ರಾಜ್ಯದ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಚಾಲನೆ


ಬೆಳೆಗಾರರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕೊಲ್ಲೀರ ಬೋಪಣ್ಣ.
ಬೆಳೆಗಾರರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕೊಲ್ಲೀರ ಬೋಪಣ್ಣ.
Published on

ಗೋಣಿಕೊಪ್ಪ : ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ಹಾಗೂ ರೈತರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ತಮ್ಮ ತೋಟದಲ್ಲಿರುವ ಕಾರ್ಮಿಕರ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಿ ಅಲ್ಲಿ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಹೊರರಾಜ್ಯದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಬೋಪಣ್ಣ, ಈಗಾಗಲೇ ಜಿಲ್ಲೆಯ ವಿವಿಧ ಭಾಗದಲ್ಲಿ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವವರ ದಾಖಲೆಗಳನ್ನು ಪೊಲೀಸ್ ಹಾಗೂ ಪಂಚಾಯಿತಿಯಿಯಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಯಾರೂ ಕೂಡ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು. ತಾವು ನೆಲೆಸಿರುವ ಲೈನ್ ಮನೆಗಳಿಗೆ ಬರುವ ಕಾರ್ಮಿಕರ ಮಾಹಿತಿಯನ್ನು ತೋಟದ ಮಾಲೀಕರಿಗೆ ನೀಡಬೇಕು. ಮಾಲೀಕರೊಂದಿಗೆ ಉತ್ತಮ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದರು.

ಮಾಲೀಕರು ಕೂಡ ಕಾರ್ಮಿಕರಿಗೆ ನಿಗದಿಪಡಿಸಿದ ದಿನಗೂಲಿಯನ್ನು ನೀಡಬೇಕು. ಆರಂಭದಲ್ಲಿಯೇ ಈ ಬಗ್ಗೆ ಕಾರ್ಮಿಕರು ಹಾಗೂ ಮಾಲೀಕರು ಒಪ್ಪಂದ ಮಾಡಿಕೊಳ್ಳಬೇಕು. ಇದರಿಂದ ಇಬ್ಬರ ನಡುವೆ ಸಮಸ್ಯೆ ಎದುರಾಗುವುದಿಲ್ಲ. ನಕಲಿ ದಾಖಲೆ ನೀಡಿ ಮಾಲೀಕರನ್ನು ವಂಚಿಸಬಾರದು ಎಂದು ವಲಸಿಗ ಕಾರ್ಮಿಕರಿಗೆ ಸೂಚನೆ ನೀಡಿದರು.

ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ವಲಸೆ ಕಾರ್ಮಿಕರು ಕಳ್ಳತನ, ದರೋಡೆ, ಮಾಲೀಕರ ಮೇಲೆ ಹಲ್ಲೆ ಸೇರಿದಂತೆ ವಿವಿಧ ರೀತಿಯ ಅಪರಾಧಗಳನ್ನು ಎಸಗಿ ರಾತ್ರೋ ರಾತ್ರಿ ಊರು ತೊರೆದು ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಾರೆ. ಇದರಿಂದ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಸ್ಥಳೀಯ ಮಟ್ಟದಲ್ಲಿ ವಲಸಿಗ ಕಾರ್ಮಿಕರ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಆರಂಭಿಸಲಾಗಿದೆ ಎಂದರು.

ಬಿ.ಶೆಟ್ಟಿಗೇರಿ ಪಂಚಾಯಿತಿಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ದಾಖಲೆ ಸಂಗ್ರಹಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ. ಇದರಿಂದ ಪೊಲೀಸ್ ಇಲಾಖೆಗೆ ಅನುಕೂಲವಾಗಿದೆ. ಪಂಚಾಯಿತಿ ಮಟ್ಟದಲ್ಲಿಯೂ ಪ್ರತಿ ತೋಟದ ಮಾಲೀಕರ ಬಳಿ ಕಾರ್ಮಿಕರ ವಿವರಗಳು ಲಭ್ಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net