

ಮೈಸೂರು: ನಗರದ ಐತಿಹಾಸಿಕ ದೊಡ್ಡ ಗಡಿಯಾರ ಗೋಪುರದ ನವೀಕರಣ ಮತ್ತು ಸಂರಕ್ಷಣಾ ಕಾಮಗಾರಿ ಅಂತೂ ಇಂತೂ ಶುರುವಾಗಿದೆ.
ಇಡೀ ಗಡಿಯಾರ ಗೋಪುರ ದುಸ್ಥಿತಿಗೆ ತಲುಪಿದ್ದು, ಇದರ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಳಭಾಗ ಶಿಥಿಲಾವಸ್ಥೆಗೆ ಮುಟ್ಟಿದೆ. ಮೆಟ್ಟಿಲು, ತಳಭಾಗ ಕುಸಿಯುವ ಭೀತಿಯೂ ಎದುರಾಗಿದೆ. ಒಂದು ವೇಳೆ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳದೆ ಇದ್ದರೆ ಕುಸಿದು ಬೀಳುವ ಆತಂಕವನ್ನು ಪಾರಂಪರಿಕ ತಜ್ಞರು ವ್ಯಕ್ತಪಡಿಸಿದ್ದರು.
ಕಳೆದ ನಾಲ್ಕೈದು ವರ್ಷದಿಂದ ಈ ಕೂಗು ಕೇಳಿಬಂದಿದೆ. ಆದರೆ, ತ್ವರಿತಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರಲಿಲ್ಲ. ವೀಕ್ಷಣೆ, ಪರಿಶೀಲನೆ, ತಜ್ಞರ ಸಲಹೆ ಸ್ವೀಕಾರ, ಕಡತ ತಯಾರಿ, ಪ್ರಸ್ತಾವನೆ ಸಲ್ಲಿಕೆ ಹೀಗೆ ವಿವಿಧ ಕಾರಣವನ್ನು ಹೇಳಿಕೊಂಡು ಕಾಮಗಾರಿಯನ್ನು ವಿಳಂಬ ಮಾಡಲಾಗಿತ್ತು.
ಹಾಗಾಗಿ, ಶಿಥಿಲಾವಸ್ಥೆ ತಲುಪಿರುವ ದೊಡ್ಡ ಗಡಿಯಾರ ಪುನಶ್ಚೇತನಕ್ಕೆ ಪಾರಂಪರಿಕ ಮತ್ತು ಇತಿಹಾಸ ತಜ್ಞರು ನಿರಂತರವಾಗಿ ಆಗ್ರಹಿಸಿದ್ದರು. ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಗುರುದತ್ತ ಹೆಗಡೆ, ಶಿಲ್ಪಾನಾಗ್ ಅವರು ಪರಿಶೀಲನೆ ನಡೆಸಿ ಅನುದಾನ ನೀಡುವ ಭರವಸೆ ನೀಡಿದ್ದರು. ಬಳಿಕ ಪರಿಶೀಲನೆ, ತಜ್ಞರ ಅಭಿಪ್ರಾಯ ಪಡೆದ ಮಹಾನಗರ ಪಾಲಿಕೆ ನವೀಕರಣಕ್ಕೆ ಅನುದಾನ ನೀಡಿತ್ತು.
ಆಗಸ್ಟ್ 9ರಂದು ಶಾಸಕ ಕೆ.ಹರೀಶ್‌ಗೌಡ, ಮೇಯರ್ ಆಗಿದ್ದ ಶಿವಕುಮಾರ್ ಕಾಮಗಾರಿಗೆ ಚಾಲನೆ ನೀಡಿದ್ದರು. ಆ ವೇಳೆಗೆ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಬಂದಿದ್ದರಿಂದ ಕಾಮಗಾರಿ ಮುಂದೂಡಲಾಗಿತ್ತು. ಇದೀಗ ಕಾರ್ಮಿಕರು ಕೆಲಸವನ್ನು ಆರಂಭಿಸಿದ್ದಾರೆ.
ಮಹಾನಗರ ಪಾಲಿಕೆ ಸಂರಕ್ಷಣಾ ಕಾಮಗಾರಿಗೆ 43 ಲಕ್ಷ ರೂ. ಅನುದಾನ ನೀಡಿದೆ. ನಗರದ ಐತಿಹಾಸಿಕ ದೊಡ್ಡಗಡಿಯಾರ ಕಟ್ಟಡದ ದುರಸ್ತಿ ಕಾಮಗಾರಿಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆಯ ಇಲಾಖೆ ಕಾಮಗಾರಿ ನಿರ್ವಹಿಸುತ್ತಿದೆ. ಜಿಲ್ಲಾ ಪಾರಂಪರಿಕ ಸಮಿತಿ ಸಲಹೆಯ ಮೇರೆಗೆ ಕೆಲಸ ನಡೆಯುತ್ತಿದೆ.
ದೊಡ್ಡ ಗಡಿಯಾರವನ್ನು ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್ ಎಂದು ಕರೆಯುತ್ತಾರೆ. ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರಜತ ಮಹೋತ್ಸವದ ಸ್ಮಾರಕವಾಗಿ ಈ ಗೋಪುರದ ಗಡಿಯಾರ ಪ್ರತಿಷ್ಠಾಪನೆಯಾಗಿದೆ. ಕ್ಲಾಕ್ ಟವರ್ ಎಂದು ಕರೆಯಲಾಗುವ ಈ ಗೋಪುರದ ಗಡಿಯಾರ, ನಗರದ ಮಧ್ಯಭಾಗದಲ್ಲಿರುವ ಅರಮನೆ ಮತ್ತು ರಂಗಾಚಾರ್ಯ ಪುರಭವನದ ಸಮೀಪದಲ್ಲಿದ್ದು, ಆಕರ್ಷಕ ತಾಣವಾಗಿದೆ.
ದೊಡ್ಡ ಗಡಿಯಾರಕ್ಕೆ ಒಂದು ಮಹತ್ವದ ಹಿನ್ನೆಲೆಯಿದೆ. 1927ರಲ್ಲಿ ಅರಮನೆ ಸಿಬ್ಬಂದಿ ದೇಣಿಗೆ ಸಂಗ್ರಹಿಸಿ ಇದನ್ನು ನಿರ್ಮಿಸಿದ್ದರು. ದೊಡ್ಡ ಗಡಿಯಾರದಲ್ಲಿ ಬೃಹತ್ ಗಾತ್ರದ ಗಂಟೆ ಸಹ ಇದ್ದು ಪ್ರತಿ ಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತು. ಆದರೆ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ 1990ರಲ್ಲಿ ಗಡಿಯಾರದ ಗಂಟೆ ಬಾರಿಸುವುದನ್ನು ನಿಲ್ಲಿಸಲಾಯಿತು. 90 ಅಡಿ ಎತ್ತರದ ಗೋಪುರದಲ್ಲಿರುವ ಗಡಿಯಾರ ಇತ್ತೀಚಿನ ವರ್ಷದಲ್ಲಿ ಕೆಟ್ಟುನಿಂತಿತ್ತು. ಇದರ ನಿರ್ವಹಣೆಗೆ ಪಾಲಿಕೆ ಕ್ರಮ ತೆಗೆದುಕೊಂಡು ನವೀನ ತಂತ್ರಜ್ಞಾನ ಬಳಸಿ ಕಟ್ಟಡ ರಿಪೇರಿಗೆ ಕ್ರಮವಹಿಸಿತ್ತು.