

ನಾಗಮಂಗಲ: ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 75ನೇ ಜಯಂತ್ಯುತ್ಸವ ಮತ್ತು 7ನೇ ವರ್ಷದ ಸಂಸ್ಮರಣೋತ್ಸವ ಪ್ರಯುಕ್ತ 7 ದಿನಗಳವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಶ್ರೀಕ್ಷೇತ್ರದಲ್ಲಿ ಭಾನುವಾರ ಸಂಜೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಜಯಂತ್ಯುತ್ಸವ ಪ್ರಯುಕ್ತ ಶ್ರೀಕ್ಷೇತ್ರ ವಿವಿಧ ಬಗೆಯ ಹೂವುಗಳಿಂದ ಮತ್ತು ವಿದ್ಯುತ್‌ದೀಪಗಳಿಂದ ಸಿಂಗಾರಗೊಂಡಿದ್ದು ಹಬ್ಬದ ವಾತಾವರಣದಂತೆ ಕಾಣುತ್ತಿದೆ. ಕಾರ್ಯಕ್ರಮಗಳ ಅಂಗವಾಗಿ ಮೊದಲ ದಿನವಾದ ಭಾನುವಾರ ಸಂಜೆ ಮಠದ ಆವರಣದಲ್ಲಿ ಹೋಮ, ಹವನ ಮತ್ತು ದೇವತೆಗಳಿಗೆ ಪೂಜೆ ಮತ್ತು ವಿವಿಧ ರೀತಿಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಕ್ಷೇತ್ರದ ಮುಖ್ಯದ್ವಾರದಲ್ಲಿರುವ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯನ್ನು ತೆಂಗಿನ ಗರಿಗಳಿಂದ ತಯಾರಿಸಲಾದ ಭವ್ಯಮಂಟಪ ಮತ್ತು ಚಪ್ಪರ ಭಕ್ತರ ಗಮನ ಸೆಳೆಯಿತು. ಧಾರ್ಮಿಕ ಪೂಜಾ ಕಾರ್ಯಗಳ ಜತೆಗೆ ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆಗೆ ಶ್ರೀ ಮಠದ ವಿವಿಧ ಶಾಖೆಯ ಶ್ರೀಗಳು ಪೂಜೆ ಸಲ್ಲಿಸಿದರು.
ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಜಿ, ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಹಾಗೂ ಯತಿಗಳು ಇದ್ದರು.