

ಶಿವಮೊಗ್ಗ: ಉಗ್ರರ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಅಗತ್ಯ ಬಿದ್ದರೆ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದರೂ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಭಯೋತ್ಪಾದಕರನ್ನು ಮಟ್ಟ ಹಾಕುವುದಕ್ಕೆ ಭಾರತದ ಯಾವ ಮುಸ್ಲಿಮರೂ ವಿರೋಧ ಮಾಡಿಲ್ಲ. ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನೂ ವಾಪಸ್ ಕಳುಹಿಸುವುದಕ್ಕೂ ಅಭ್ಯಂತರವಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಕಿಸ್ತಾನದ ಮೇಲೆ ನಡೆದ ಏರ್‌ಸ್ಟ್ರೈಕ್ ದಾಳಿ ವಿರೋಧಿಸಿದ, ಪಾಕಿಸ್ತಾನಕ್ಕೆ ಜೈ ಎಂದಿರುವ ನಟಿ ರಾಖಿ ಸಾವಂತ್ ಅವರನ್ನು ಭಾರತಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಅವರು ಮಾತ್ರವಲ್ಲ, ಪಾಕಿಸ್ತಾನದ ಪರ ಯಾರೇ ಇದ್ದರೂ ಅವರನ್ನೂ ಅಲ್ಲಿಗೆ ಓಡಿಸಬೇಕು. ಅದಕ್ಕೆ ನಾವು ಬೆಂಬಲ ನೀಡುತ್ತೇವೆ. ಯುದ್ಧಕ್ಕೆ ಹೋಗಲು ನಾವೂ ರೆಡಿ ಇದ್ದೇವೆ. ಭಾರತೀಯ ಮುಸ್ಲಿಮರು ಕೂಡ ರೆಡಿ ಇದ್ದಾರೆ. ಯುದ್ಧದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಪರವಿದೆ ಎಂದರು.
ಪಾಕಿಸ್ತಾನದ ಪ್ರಜೆಗಳನ್ನು ಹೊರದಬ್ಬಬೇಕು. ಆದರೆ ಕಾಂಗ್ರೆಸ್‌ನವರು ಪಾಕ್ ಪರವೆಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲೇ ಪಾಕಿಸ್ತಾನಕ್ಕೆ ಕಾಂಗ್ರೆಸ್ ತಕ್ಕಪಾಠ ಕಲಿಸಿದೆ ಎಂದು ಹೇಳಿದರು.
ಪಾಕಿಸ್ತಾನದವರು ಸಿದ್ದರಾಮಯ್ಯನವರ ಬೀಗರೇ?
ಪಾಕಿಸ್ತಾನದವರನ್ನು ಇಲ್ಲಿ ಇಟ್ಟಿಕೊಳ್ಳೋಕೆ ಅವರೇನು ಸಿದ್ದರಾಮಯ್ಯನವರ ಬೀಗರೇ? ಯಾವ ಕಾರಣಕ್ಕೂ ಪಾಕ್ ಪ್ರಜೆಗಳನ್ನು ರಾಜ್ಯದಲ್ಲಿ ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಾಕಿಸ್ತಾನದವರು ರಾಜ್ಯದಲ್ಲಿ ಇದ್ದಾರೆ ಎಂಬ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಕೂಡಲೇ ದೇಶದಲ್ಲಿರುವ ಪಾಕಿಸ್ತಾನದವರನ್ನು ಹೊರಹಾಕಬೇಕು. ಅದನ್ನು ಬಿಟ್ಟು ಹೇಳಿಕೆ ಕೊಡುವುದು ಸರಿಯಲ್ಲ. ಎನ್‌ಐಎ ತಂಡವನ್ನು ಕರೆಸಿಕೊಂಡು ಪಾಕ್ ಪ್ರಜೆಗಳನ್ನು ಹೊರಹಾಕಿ ಎಂದರು. ಪಾಕಿಸ್ತಾನದವರೇನು ನಮ್ಮ ಸಂಬಂಧಿಕರಾ? ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೇಳಿಕೆ ನೀಡುವುದು ಸರಿಯಲ್ಲ. ದ್ವೇಷದ ರಾಜಕಾರಣವನ್ನು ಬಿಜೆಪಿಯವರು ಕೈಬಿಡಬೇಕು ಎಂದರು.