ಗ್ರಾಮೀಣ ಜನರಿಗೆ 'ದೃಷ್ಟಿ ಚಕ್ರ' ಆಸರೆಯಾಗಲಿ

KMC
Published on

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಆಶಯ

ಕೆಎಂಸಿಯ ನೇತ್ರ ತಪಾಸಣಾ ಸಂಚಾರಿ ಘಟಕ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜನರ ಆರೋಗ್ಯ ರಕ್ಷಣೆಯಲ್ಲಿ ಮಣಿಪಾಲ ಫೌಂಡೇಷನ್​, ಮಾಹೆ, ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯು ಬದ್ಧತೆಯನ್ನು ಹೊಂದಿದೆ. ಅದರ ಮುಂದುವರಿದ ಭಾಗವಾಗಿ ದೃಷ್ಟಿ ಚಕ್ರವು ಜನರ ಕಣ್ಣುಗಳ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಲಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ದೃಷ್ಟಿ ಸಮಸ್ಯೆ ಅನುಭವಿಸುತ್ತಿರುವವರಿಗೆ ಆಸರೆಯಾಗಲಿ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಮಣಿಪಾಲದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಣಿಪಾಲ ಫೌಂಡೇಷನ್​ನ ಸಹಯೋಗದೊಂದಿಗೆ ಗುರುವಾರ (ಅ.30) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೃಷ್ಟಿ ಚಕ್ರ ಹೆಸರಿನ ಸುಧಾರಿತ ನೇತ್ರ ತಪಾಸಣಾ ಸಂಚಾರಿ ಘಟಕ (ಬಸ್​) ಉದ್ಘಾಟಿಸಿ ಮಾತನಾಡಿದರು.

ಅತ್ಯಾಧುನಿಕ ಸೌಲಭ್ಯ

ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್​ ಜನರಲ್​ (ಡಾ.) ಎಂ.ಡಿ. ವೆಂಕಟೇಶ್​ (ವಿಎಸ್​ಎಂ ನಿವೃತ್ತ) ಮಾತನಾಡಿ, ಕಣ್ಣಿನ ಪೊರೆ, ಗ್ಲುಕೋಮಾ, ಮಧುಮೇಹ ರೆಟಿನೋಪತಿ, ಕಾರ್ನಿಯಲ್​ ಕುರುಡುತನ ಮತ್ತು ರಿಫ್ರಾಕ್ಷನ್​ ದೋಷಗಳನ್ನು ಪತ್ತೆಹಚ್ಚಲು ಈ ಘಟಕ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಸಂಚಾರಿ ವಾಹನವು ತೃತೀಯ ವೈದ್ಯಕೀಯ ಸಂಸ್ಥೆ ಮತ್ತು ಗ್ರಾಮೀಣ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ ಎಂದರು.

ವೈದ್ಯಕೀಯ ಶ್ರೇಷ್ಠ ಸೇವೆ

H-S-Ballal
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಮಾತನಾಡಿ, ಸುಸ್ಥಿರ ಆರೋಗ್ಯಕ್ಕಾಗಿ ಮಾಹೆ ಮತ್ತು ಕಸ್ತೂರ್ಬಾ ಆಸ್ಪತ್ರೆಯು ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿದೆ. ಸಮುದಾಯ ಆರೋಗ್ಯ ರಕ್ಷಣೆಯ ಉಪಕ್ರಮಗಳಲ್ಲಿ ದೃಷ್ಟಿ ಚಕ್ರ ಘಟಕವು ನಮ್ಮ ವೈದ್ಯಕೀಯ ಶ್ರೇಷ್ಠತೆಗೆ ನಿದರ್ಶನವಾಗಿದೆ. ಈ ಉದಾತ್ತ ಯೋಜನೆ ಜಿಲ್ಲಾಡಳಿತದ ಸಹಯೋಗದೊಂದಿಗೆ ಯಶಸ್ಸು ಕಾಣಲಿ ಎಂದರು.

ಉಡುಪಿ ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ಲತಾ ನಾಯಕ್​, ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್​ ಕೆ. ರಾವ್​, ಮಾಹೆ ಸಿಒಒ ಡಾ.ಆನಂದ್​ ವೇಣುಗೋಪಾಲ್​, ಕೆಎಂಸಿ ಡೀನ್​ ಡಾ.ಅನಿಲ್​ ಕೆ. ಭಟ್​, ಎಂಸಿಎಚ್​ಪಿ ಡೀನ್​ ಡಾ.ಅರುಣ್​ ಮಯ್ಯ, ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಡಾ.ಸುಧಾಕರ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ, ಮಾಹೆಯ ಕಾರ್ಪೊರೇಟ್​ ಸಂಬಂಧಗಳ ನಿರ್ದೇಶಕ ಡಾ.ಹರೀಶಕುಮಾರ್​ ಎಸ್​. ಉಪಸ್ಥಿತರಿದ್ದರು.

ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್​ ಕಾಮತ್​ ಸ್ವಾಗತಿಸಿದರು. ನೇತ್ರವಿಜ್ಞಾನ ಪ್ರಾಧ್ಯಾಪಕಿ ಡಾ. ಸುಲತಾ ವಿ. ಭಂಡಾರಿ ದೃಷ್ಟಿ ಚಕ್ರ ಯೋಜನೆಯ ಕುರಿತು ಮಾಹಿತಿ ನೀಡಿದರು. ಆಪ್ಟೋಮೆಟ್ರಿ ವಿಭಾಗದ ಮುಖ್ಯಸ್ಥೆ ಡಾ. ಕೃತಿಕಾ ವಂದಿಸಿದರು.

ದೃಷ್ಟಿ ಚಕ್ರವು ಸಮುದಾಯಕ್ಕೆ ಸಮಗ್ರ ಆರೋಗ್ಯ ಸೇವೆ ವಿಸ್ತರಿಸುವ ಪ್ರಮುಖ ಧ್ಯೇಯವಾಗಿದೆ. ಜನರ ಬಳಿಯೇ ತೆರಳಿ ದೃಷ್ಟಿ ತಪಾಸಣೆ ನಡೆಸುವ ವಿಶೇಷ ಸೌಲಭ್ಯವಾಗಿದೆ. ಈ ಸೌಕರ್ಯದಿಂದ ದೃಷ್ಟಿ ದೋಷ ಅಥವಾ ಕುರುಡುತನದ ಸಾಧ್ಯತೆಯನ್ನು ಮೊದಲೇ ಗುರುತಿಸಿ ಕಣ್ಣಿನ ಸಮಗ್ರ ಆರೈಕೆಗೆ ಸಹಕಾರಿಯಾಗಿದೆ. | ಹರಿನಾರಾಯಣ ಶರ್ಮ. ಮಣಿಪಾಲ್​ ಫೌಂಡೇಷನ್​ನ ಸಿಇಒ

ಐದು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ

KMC 2
ದೃಷ್ಟಿ ಚಕ್ರವು ಮಣಿಪಾಲ್​ ಫೌಂಡೇಷನ್​ನ ಯೋಜನೆಯಾಗಿದ್ದು, ಸುಧಾರಿತ ಸಂಚಾರಿ ನೇತ್ರ ತಪಾಸಣಾ ಘಟಕವಾಗಿದೆ. ಆರಂಭಿಕ ರೋಗನಿರ್ಣಯ ಮತ್ತು ಕುರುಡುತನ ತಡೆಗಟ್ಟಲು ಸಹಾಯಕವಾಗಿದ್ದು, ಜನರಿಗೆ ಆರೋಗ್ಯ ಸೇವೆ ಇನ್ನಷ್ಟು ಹತ್ತಿರವಾಗಲಿದೆ. ಈ ಘಟಕವು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಡಾ. ಸುಲತಾ ವಿ. ಭಂಡಾರಿ ನೇತೃತ್ವ ವಹಿಸಲಿದ್ದಾರೆ. ನೇತ್ರಶಾಸ್ತ್ರ ಮುಖ್ಯಸ್ಥ ಡಾ. ಯೋಗೀಶ್​ ಕಾಮತ್​, ಆಪ್ಟೋಮೆಟ್ರಿ ಮುಖ್ಯಸ್ಥೆ ಡಾ. ಕೃತಿಕಾ, ಸಮುದಾಯ ಆರೋಗ್ಯದ ಮುಖ್ಯಸ್ಥ ಡಾ. ಅಶ್ವಿನ್​ ಕುಮಾರ್​ ಸಹ- ಅಧಿಕಾರಿಗಳಾಗಿ ಸೇವೆ ನೀಡಲಿದ್ದಾರೆ ಎಂದು ಮಾಹೆ ಉಪ ಕುಲಪತಿ ಡಾ. ಶರತ್​ ಕೆ. ರಾವ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net