

ಶಿವಮೊಗ್ಗ: ಪದವೀಧರರಿಗೆ ಗುಂಡು ಪಾರ್ಟಿ ಕೊಡುವ ಮೂಲಕ ಚುನಾವಣೆಯಲ್ಲಿ ಬಿಜೆಪಿಯನ್ನು ಗುಂಡು ಪಾರ್ಟಿಯಾಗಿ ಬದಲಾಯಿಸಿದ ಅಪಕೀರ್ತಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿಗೆ ಸಲ್ಲುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಒಬ್ಬ ವೈದ್ಯರಾದ ಧನಂಜಯ ಸರ್ಜಿ ಪದವೀಧರರನ್ನು ದುಶ್ಚಟಕ್ಕೆ ಪ್ರಲೋಭಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರು ಸುಸಂಸ್ಕೃತ ಕುಟುಂಬದ ಹಿನ್ನೆಲೆಯವರು. ಚುನಾವಣೆಗೋಸ್ಕರ ಪ್ರತಿ ದಿನ ಕ್ಷೇತ್ರದ ವಿವಿಧೆಡೆ ಗುಂಡು ಪಾರ್ಟಿಗಳನ್ನು ಆಯೋಜಿಸಬಾರದಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಜಿ ಅವರ ನಡೆಯಿಂದ ಬಿಜೆಪಿಗೆ ಅವಮಾನವಾಗಿದೆ. 40 ವರ್ಷಕ್ಕೂ ಹೆಚ್ಚು ಕಾಲ ಬಿಜೆಪಿಯಲ್ಲಿದ್ದ ನನಗೂ ನೋವಾಗಿದೆ. ಬಿಜೆಪಿಯಲ್ಲಿ ಯಾರೂ ಈ ರೀತಿ ಪಾರ್ಟಿ ಆಯೋಜನೆ ಅಭ್ಯಾಸ ಇಟ್ಟುಕೊಂಡಿರಲಿಲ್ಲ ಎಂದರು.
ಪದವೀಧರ ಮತದಾರರು ಗುಂಡು ಪಾರ್ಟಿಗೆ ಹೋಗಿ ಬಂದ ಮರುದಿನ ನನಗೆ ಫೋನ್ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಸರ್ಜಿ ಅವರ ಪಾರ್ಟಿಗೆ ಹೋಗಿದ್ದೆವು. ನಮ್ಮ ಮತ ನಿಶ್ಚಿತವಾಗಿಯೂ ರಘುಪತಿ ಭಟ್‌ಗೆ ಎನ್ನುತ್ತಿದ್ದಾರೆ. ಒಂದು ಕಡೆ ಗುಂಡು ಪಾರ್ಟಿ ಮಾಡಿಸುವವರು, ಇನ್ನೊಂದು ಕಡೆ ನರೇಂದ್ರ ಮೋದಿ, ಅಮಿತ್ ಷಾ ಅವರ ರಾಷ್ಟ್ರೀಯತೆ ಸಿದ್ಧಾಂತ ಒಪ್ಪಿಕೊಂಡ ಸುಸಂಸ್ಕೃತ ವ್ಯಕ್ತಿ ರಘುಪತಿ ಭಟ್ಟರು. ಇವರಿಬ್ಬರಲ್ಲಿ ಯಾರು ಬೇಕು ಎಂಬುದನ್ನು ಮತದಾರರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿಗೆ ಡಾ. ಸರ್ಜಿ ಕೊಡುಗೆಯೇನು?:ಬಿಜೆಪಿಗೆ ಡಾ. ಧನಂಜಯ ಸರ್ಜಿ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಕೆ.ಎಸ್.ಈಶ್ವರಪ್ಪ, ಹಿಂದು ಕಾರ್ಯಕರ್ತ ಹರ್ಷನ ಹತ್ಯೆಯಾದಾಗ ಸರ್ಜಿ ಅದನ್ನು ಖಂಡಿಸಲಿಲ್ಲ. ಹಾಗೆಂದು ಸುಮ್ಮನೆಯೂ ಇರಲಿಲ್ಲ. ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಗತಿಪರರೊಂದಿಗೆ ಶಾಂತಿ ನಡಿಗೆ ಮಾಡಿದರು. ಕೆಜೆಪಿಯಲ್ಲಿ ಇದ್ದವರು ಮಾತ್ರ ಸರ್ಜಿ ಅವರೊಂದಿಗಿದ್ದಾರೆ. ಉಳಿದ ಬಿಜೆಪಿ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ ಎಂದರು.
ಮಾಜಿ ಮೇಯರ್ ಸುವರ್ಣಾ ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪ್ರಮುಖರಾದ ಕಾಚಿನಕಟ್ಟೆ ಸತ್ಯನಾರಾಯಣ, ಅ.ಮ.ಪ್ರಕಾಶ್, ವಾಗೀಶ್, ಹೊನ್ನಾಳಿ ನಾರಾಯಣರಾವ್, ಬಾಲು, ಮೋಹನ್ ಜಾಧವ್ ಸುದ್ದಿಗೋಷ್ಠಿಯಲ್ಲಿದ್ದರು.