ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರು ನಿರ್ವಹಣೆ ಗೆ ಕ್ರಮ

Water Bottle
Published on

ಯಾದಗಿರಿ : 2024ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ 6 ತಾಲೂಕುಗಳನ್ನು ಬರಪೀಡಿತ ತಾಲ್ಲೂಕುಗಳನ್ನಾಗಿ ರಾಜ್ಯ ಸರ್ಕಾರ ಘೋಷಿಸಿರುತ್ತದೆ, ಕಳೆದ ವರ್ಷ 59 ಗ್ರಾಮಗಳಿಗೆ ಬಾಡಿಗೆ ಕೊಳವೆಬಾವಿಗಳ ಮುಖಾಂತರ ಮತ್ತು 1 ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿರುತ್ತದೆ, ಹೊಸದಾಗಿ 255 ಗ್ರಾಮಗಳಿಗೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಿ ಮತ್ತು 172 ಗ್ರಾಮಗಳಿಗೆ ಹಳೆ ಕೊಳವೆಬಾವಿ ಪ್ಲಷಿಂಗ್ ಮೂಲಕ ನೀರು ಪೂರೈಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೇಳಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆಬಾವಿಗಳ ಬಾಡಿಗೆ ಹಾಗೂ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಒಟ್ಟು 30,60,798 ರೂ.ಗಳು ಖರ್ಚು ಮಾಡಲಾಗಿರುತ್ತದೆ.

2024-25ನೇ ಸಾಲಿನಲ್ಲಿ ಸರಾಸರಿಗಿಂತ ಹೆಚ್ಚು ಮಳೆಯಾಗಿರುತ್ತದೆ, ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 2 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು 10 ಗ್ರಾಮಗಳಿಗೆ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ, ಮೇ ತಿಂಗಳ ವರೆಗೆ 91 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಗುರುಮಠಕಲ್ ಪುರಸಭೆಯಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿತ್ತು ಮತ್ತು ಉಳಿದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ 1 ಅಥವಾ 2 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ, ಒಟ್ಟು 21 ಕುಡಿಯುವ ನೀರಿನ ಕಾಮಗಾರಿಗಳಿಗೆ ಒಟ್ಟು 46.30 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಈ ವರ್ಷ ಗುರುಮಠಕಲ್‌ನಲ್ಲಿ ನೀರಿನ ಸಮಸ್ಯೆ ಬಗೆಹರಿಸಿ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ, ಉಳಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಕಳೆದ ವರ್ಷ ಗರಿಷ್ಠ ತಾಪಮಾನ 44.6' ಸಿ ನಷ್ಟು ದಾಖಲಾಗಿತ್ತು, ಆದರೆ ಈ ವರ್ಷ ಮಾರ್ಚ್ ತಿಂಗಳ 14ನೇ ತಾರೀಖಿನಂದು ಸೈದಾಪೂರ ಹೊಬ್ಬಳಿಯಲ್ಲಿ 41.8' ಸಿ ನಷ್ಟು ದಾಖಲಾಗಿದೆ, ಮುಂದುವರೆದು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಾಪಮಾನ ಹೆಚ್ಚು ದಾಖಲಾಗುವ ಮುನ್ಸೂಚನೆ ಇದೆ ಎಂದು ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಾಹಣ ಪ್ರಾಧಿಕಾರದಿಂದ ಹೆಚ್ಚುತ್ತಿರುವ ತಾಪಮಾನ ಬಿಸಿಗಾಳಿಯಿಂದಾಗುವ ಅವಘಡಗಳಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗೆ ಗ್ರಾಮಗಳಲ್ಲಿ ಕಾರ್ಯಾಗಾರ, ಡಂಗೂರ ಸಾರುವ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 12 ಜನರು ಸಿಡಿಲಿನಿಂದ ಮೃತ ಪಟ್ಟಿರುತ್ತಾರೆ. ಗುಡುಗು ಸಿಡಿಲುಗಳಿಂದಾಗುವ ಅವಘಡಗಳಿಂದ ರಕ್ಷಣೆ ಪಡೆಯಲು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಾಮಗ್ರಿಗಳನ್ನು ಉಪಯೋಗಿಸಿ ಸಾರ್ವಜನಿಕರಿಗೆ ಗ್ರಾಮಗಳಲ್ಲಿ ಕಾರ್ಯಾಗಾರ, ಡಂಗೂರ ಸಾರುವ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ನಾರಾಯಣಪೂರ, ಸನ್ನತಿ, ಗುರುಸಣಿಗಿದಲ್ಲಿ ಬೇಸಿಗೆ ಕಾಲದಲ್ಲಿ ಯಾವುದೇ ತರಹದ ನೀರಿನ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 56 ವಾರಗಳಿಗಾಗುವಷ್ಟು ಮೇವಿನ ಸಂಗ್ರಹಣೆ ಇದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಾಧ್ಯತೆ ಇರುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಕ್ ಶಂಕರ,ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್ ಜಿಲ್ಲಾ

ಮಟ್ಟದ ಅಧಿಕಾರಿಗಳು ಹಾಗೂ ಇತ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net