

ಬೇಲೂರು: ಬಾಪೂಜಿ ಶಾಲೆಯಲ್ಲಿ ಓದಿದ ನಾನು ಇಂದು ಈ ಶಾಲೆಯ ಕಾರ್ಯಕ್ರಮಕ್ಕೆ ಆಹ್ವಾನಿತನಾಗಿ ಬಂದಿದ್ದು ಸಂತೋಷ ತಂದಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಪಟ್ಟಣದ ಬಾಪೂಜಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಪ್ರಾರಂಭದ ದಿನಗಳಲ್ಲಿ ಬಾಪೂಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದೇನೆ. ಈಗ ನಾನು ಪುರಸಭೆ ಅಧ್ಯಕ್ಷನಾಗಿ ಈ ಶಾಲೆಯ ಕಾರ್ಯಕ್ರಮಕ್ಕೆ ಬಂದಿರುವುದು ಮರೆಯಲು ಸಾಧ್ಯವಿಲ್ಲ. ಇಲ್ಲಿಗೆ ಬಂದ ತಕ್ಷಣವೇ ಹಳೆಯ ನೆನಪು ಮರುಕಳಿಸುತ್ತಿದೆ. ಹಾಗೆಯೇ ಅಕ್ಷರವಿಲ್ಲದೆ ಬಾಳು ಕತ್ತಲೆ ಎಂಬಂತೆ, ಜೀವನದ ಮೊದಲ ಹಂತದಲ್ಲಿ ಶಿಕ್ಷಣ ಎನ್ನುವುದು ಬಹುಮುಖ್ಯ ಎಂದರು.
ನಮ್ಮ ಜೀವನದಲ್ಲಿ ನಾವು ಹೇಗೆ ಬದುಕ ಬೇಕೆಂಬುದನ್ನು ಕಲಿಯಬೇಕಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಜನ್ಮ ಕೊಟ್ಟರೆ ಶಿಕ್ಷಕರು ಶಿಕ್ಷಣದೊಂದಿಗೆ ಜೀವನದ ಪಾಠ ಕಲಿಸುತ್ತಾರೆ. ಈ ಸಂಸ್ಥೆಯ ಸಂಸ್ಥಾಪಕರ ಕೊಡುಗೆ ಅಪಾರವಿದ್ದು, ನಾನು ಕಲಿತ ಶಾಲೆಗೆ ಕೈಲಾದ ಸಹಕಾರ ನೀಡುತ್ತೇನೆ. ಪುರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಲಾಗುವುದು. ಈ ಸಂಸ್ಥೆ ಅಧ್ಯಕ್ಷ ಜಗದೀಶ್ ಸಹ ಇದೇ ಶಾಲೆಯಲ್ಲಿ ಓದಿದ್ದು, ಈಗ ಅವರೂ ನನ್ನೊಂದಿಗೆ ಪುರಸಭೆ ಸದಸ್ಯರಾಗಿ ಕೆಲಸ ಮಾಡುತ್ತಿರುವುದು ಸಂತಸವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಪಾಲಕರುಮಕ್ಕಳಿಗೆ ಸಂಸ್ಕಾರ ಕಲಿಸಿದರೆ, ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಬೇಲೂರಿನಲ್ಲಿ ಹಳೆಯ ಸಂಸ್ಥೆಯೆಂದರೆ ಅದು ಬಾಪೂಜಿ ವಿದ್ಯಾಸಂಸ್ಥೆ. ಹೊಸ ಕನಸು ಕಟ್ಟಿಕೊಂಡು ಬಂದ ಈ ಸಂಸ್ಥೆ ಇಂದು ಉನ್ನತ ಮಟ್ಟಕ್ಕೆ ತಲುಪಿದೆ. ಇಲ್ಲಿ ಹಲವಾರು ವಿದ್ಯಾರ್ಥಿಗಳು ಓದಿ ಉನ್ನತ ಹುದ್ದೆಯಲ್ಲಿದ್ದಾರೆ. ಒಂದು ಸಂಸ್ಥೆ ಕಟ್ಟಲು ಎಲ್ಲರ ಶ್ರಮ ಇದ್ದು ಆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ. ಇಂದಿನ ಜಂಜಾಟದ ಬದುಕಿನ ನಡುವೆ ಕನ್ನಡದ ಜತೆ ಆಂಗ್ಲ ಶಿಕ್ಷಣಕ್ಕೂ ಒತ್ತು ನೀಡಬೇಕಾಗುತ್ತದೆ ಎಂದರು.
ಬಾಪೂಜಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮತ್ತು ಪುರಸಭಾ ಸದಸ್ಯ ಜಗದೀಶ್, ಸಂಸ್ಥೆಯ ಸುದರ್ಶನ್, ವೇಣುಗೋಪಾಲ್, ಚೇತನ್, ಪ್ರವೀಣ್, ಕೃಷ್ಣಮೂರ್ತಿ ಇತರರಿದ್ದರು.