ಪೈಪ್ ದುರಸ್ತಿಗೆ ಮುಂದಾಗುತ್ತಿಲ್ಲ ಗ್ರಾಪಂ

26 myk
Published on

ಮಾಯಕೊಂಡ: ಕುಡಿಯುವ ನೀರು ಸರಬರಾಜು ಪೈಪ್ ಒಡೆದು 5-6 ತಿಂಗಳಾದರೂ ಗ್ರಾಮ ಪಂಚಾಯಿತಿಯವರು ದುರಸ್ತಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆನಗೋಡು ಹೋಬಳಿ ಕಂದನಕೋವಿ ಗ್ರಾಮದಿಂದ ಮೂಡೇನಹಳ್ಳಿಗೆ ಹೋಗುವ ಮಾರ್ಗದಲ್ಲಿನ ಕೆರೆಯ ಸಮೀಪ ಇರುವ ಬೋರ್​ವೆಲ್​ನಿಂದ ಕಂದನಕೋವಿ ಗ್ರಾಮದ ಓವರ್​ಹೆಡ್ ಟ್ಯಾಂಕ್​ಗೆ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಅದನ್ನು ಸರಿಪಡಿಸುವಂತೆ ಪಿಡಿಒ ಹಾಗೂ ಗ್ರಾಪಂ ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

ಪೈಪ್​ಗೆ ಎರಡು ಗೇಟ್​ವಾಲ್ವ್ ಅಳವಡಿಸಿದ್ದು, ಓವರ್ ಹೆಡ್ ಟ್ಯಾಂಕ್​ಗೆ ಮತ್ತು ಗ್ರಾಮದ ನಲ್ಲಿಗಳಿಗೆ ನೀರು ಅದರಿಂದ ನೇರವಾಗಿ ಸರಬರಾಜು ಆಗುತ್ತದೆ. ಆದರೆ ಓವರ್​ಹೆಡ್ ಟ್ಯಾಂಕ್​ಗೆ ಸರಬರಾಜು ಮಾಡುವ ಗೇಟ್​ವಾಲ್ವ್ ಬಳಿ ಪೈಪ್ ಒಡೆದಿದ್ದು, ಹೊರ ಬಂದ ನೀರು ಕಲುಷಿತಗೊಂಡು ಮತ್ತೆ ಪೈಪ್ ಮೂಲಕ ಟ್ಯಾಂಕ್ ಸೇರುತ್ತಿದೆ. ಇದರಿಂದ ವಾಂತಿ-ಭೇದಿ, ಡೆಂಗೆ, ಚಿಕೂನ್ ಗುನ್ಯಾ ಸೇರಿ ಹಲವು ರೋಗಗಳು ಬರುವುದೆಂಬ ಭೀತಿಯಿದೆ. ಗ್ರಾಪಂ ಕೂಡಲೇ ದುರಸ್ತಿ ಮಾಡಿಸಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net