

ಗುಂಡ್ಲುಪೇಟೆ: ತಾಲೂಕಿನ ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಬುಧವಾರ ತಾಲೂಕಿನ ಕಮರಹಳ್ಳಿ ಕೆರೆಗೆ ಬಾಗಿನ ಸಲ್ಲಿಸಿ ಮಾತನಾಡಿದರು. ದಿ.ಮಹದೇವಪ್ರಸಾದ್ ಅವರು ಸಚಿವರಾಗಿದ್ದಾಗ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಈ ಬಾರಿ ಉತ್ತಮ ಮಳೆ ಬರುತ್ತಿರುವುದರಿಂದ ಹಲವಾರು ಕೆರೆಗಳು ಕೋಡಿಬೀಳುತ್ತಿವೆ. ಇದರಿಂದ ತಾಲೂಕಿನ ಅಂತರ್ಜಲವೃದ್ಧಿಗೆ ನೆರವಾಗುತ್ತಿದೆ. ಸದ್ಯ ಉತ್ತಮ ಮಳೆ ಬೀಳುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲದ ಕೊರತೆ ನೀಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೆರೆಗಳಿಗೆ ನೀರು ತುಂಬಿಸಲಾಗುವುದು ಹಾಗೂ ಕ್ಷೇತ್ರದ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿಟ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಗೌಡಿಕೆ ಸೋಮಪ್ಪ, ಎಪಿಎಂಸಿ ನಿರ್ದೇಶಕ ಆರ್.ಎಸ್.ನಾಗರಾಜು, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮಾಜಿ ಸದಸ್ಯ ನೀಲಕಂಠಪ್ಪ, ಕಮರಹಳ್ಳಿ ಕುಮಾರ್ ಇದ್ದರು.