

ಕಿಕ್ಕೇರಿ: ತಾಲೂಕಿನ ಅಭಿವೃದ್ಧಿ, ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಪಟ್ಟಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮನೆಮನೆಗೆ ಶುದ್ಧ ನೀರು ನೀಡುವ ಮಹತ್ತರ ಯೋಜನೆ ಇದಾಗಿದೆ. 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಬಹುತೇಕ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಇದರ ಪ್ರಯೋಜನ ಕಾಣುತ್ತಿಲ್ಲ. ಸಮಗ್ರವಾಗಿ ಎಲ್ಲರಿಗೂ ಶುದ್ಧ ನೀರು ಸರಬರಾಜು ಮಾಡಲು ಈ ಯೋಜನೆ ವಿಶೇಷವಾಗಿದೆ. ಹಳೆಯ ಕುಡಿಯುವ ನೀರಿನ ಪೈಪುಗಳ ಬದಲಾಗಿ ಹೊಸದಾಗಿ ಈ ಯೋಜನೆಗೆ ಪೈಪುಗಳನ್ನು ಅಳವಡಿಸಲಾಗುವುದು ಎಂದರು.
ಕಾಮಗಾರಿ ವೇಳೆ ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳಬೇಕು. ನಲ್ಲಿಗಳಿಗೆ ಮೀಟರ್ ಅಳವಡಿಸಿ ನೀರು ಪೋಲು ಆಗದಂತೆ ನಾಗರಿಕರು ಸಹಕರಿಸಬೇಕು. ನೀರು ದ್ರವರೂಪದ ಚಿನ್ನವಾಗಿದ್ದು, ಬೇಸಿಗೆ ಕಾಲದಲ್ಲಿ ಪೋಲು ಮಾಡದಂತೆ ಸಂರಕ್ಷಿಸಬೇಕು. ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆಲಸ ಮಾಡಲು ಜಾಗೃತರಾಗಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಕೆ.ಆರ್.ರಾಜೇಶ್, ಉಪಾಧ್ಯಕ್ಷೆ ಸರಸ್ವತಿ, ಪಿಡಿಒ ಚಲುವರಾಜು, ಸದಸ್ಯರಾದ ಎಸ್.ಕೆ.ಬಾಲಕೃಷ್ಣ, ಕೆ.ಆರ್.ಕೃಷ್ಣ, ಕೆ.ಆರ್.ಪುಟ್ಟರಾಜು, ಚಂದ್ರಶೇಖರ್, ರೇಣುಕಾ, ಮುಖಂಡರಾದ ಕಾಯಿ ಮಂಜೇಗೌಡ, ಮಲ್ಲೇಶ್, ಶೇಖರ್, ಅಣ್ಣಯ್ಯ, ಮಂಜು, ಗೋವಿಂದರಾಜು, ದೇವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು ಮತ್ತಿತರರಿದ್ದರು.