

ಮೈಸೂರು: ಮನ್ರೇಗಾ, 15ನೇ ಹಣಕಾಸು ಆಯೋಗದ ಅನುದಾನ, ರಾಜ್ಯ, ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು ಬಳಸಿಕೊಂಡು ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಬರಗಾಲ ನಿರ್ವಹಣೆಯೇ ನಿಮಗೆ ಮೊದಲ ಆದ್ಯತೆಯ ಕೆಲಸ ಆಗಬೇಕು. 15ನೇ ಹಣಕಾಸು ಆಯೋಗದಿಂದ ಬರುವ ಅನುದಾನದಲ್ಲಿ ನೀರಿನ ಕಾಮಗಾರಿಗಳಿಗೆ ಒತ್ತು ಕೊಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂ ಅಧಿಕಾರಿಗಳೊಂದಿಗೆ ಕ್ಷೇತ್ರದ ಪ್ರಗತಿ ಪರಿಶಿಲನಾ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಐದಾರು ತಿಂಗಳ ಕಾಲ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ತಪ್ಪದೆ ಭೇಟಿ ನೀಡಿ ಪರಿಸ್ಥಿತಿ ಅರಿತು ಕೆಲಸ ಮಾಡಬೇಕು ತಾಕೀತು ಮಾಡಿದರು.
ಬೀರಿಹುಂಡಿ ಗ್ರಾಪಂ ಪಿಡಿಒ ಮಾತನಾಡಿ, ತಾಲೂಕಿನ ಬೀರಿಹುಂಡಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ನಾಲ್ಕು ಕೊಳವೆ ಬಾವಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಖಾಸಗಿಯವರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರಿಗೆ ಸೇರಿದ ಕೊಳವೆಬಾವಿಗಳಿಂದ ನೀರು ಪಡೆಯಲಾಗುವುದು. 15 ದಿನಗಳಲ್ಲಿ ಪೈಪ್‌ಲೈನ್ ಮಾಡಿ ನೀರು ಪೂರೈಸಲು ಕ್ರಮ ವಹಿಸಲಾಗುವುದು ಎಂದರು.