

ಸವಣೂರ: ವರದಾ ನದಿಯಲ್ಲಿ ಹರಿವು ಕಡಿಮೆಯಾಗಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ಪಟ್ಟಣದಲ್ಲಿ ಗೃಹೋಪಯೋಗಿ 4750, ವಾಣಿಜ್ಯ 40 ಸೇರಿ ಪಟ್ಟಣದಲ್ಲಿ ಒಟ್ಟು 4790 ನಳಗಳಿವೆ. ಪಟ್ಟಣದ ವಿವಿಧೆಡೆ 106 ಕೊಳವೆಬಾವಿಗಳಿವೆ. ಆದರೂ, ಸುಮಾರು 60 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಜನರ ಅವಶ್ಯಕತೆಗೆ ಅನುಗುಣವಾಗಿ ನಿತ್ಯ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ.
2012ಕ್ಕೂ ಮುನ್ನ ತಿಂಗಳಿಗೆ ಒಂದು ಬಾರಿ ಕುಡಿಯುವ ನೀರು ಪೂರೈಸಲಾಗುತ್ತಿತ್ತು. 2012ರಲ್ಲಿ ಕೆರೆಗಳಿಗೆ ವರದಾ ನದಿ ತುಂಬಿಸುವ ಯೋಜನೆಯಡಿ ತಾಲೂಕಿನ ಮೆಳ್ಳಾಗಟ್ಟಿ ವರದಾ ನದಿಯಲ್ಲಿ ಜಾಕ್ವೆಲ್ ನಿರ್ವಿುಸಲಾಯಿತು. ಅಲ್ಲಿಂದ ನೀರನ್ನು ಪಟ್ಟಣದ ಹೊರವಲಯದಲ್ಲಿರುವ ಓವರ್ಹೆಡ್ ಟ್ಯಾಂಕ್ಗಳಿಗೆ ಸಾಗಿಸಿ, ನಂತರ ಶುದ್ಧೀಕರಿಸಿ ಪಟ್ಟಣಕ್ಕೆ ಪೂರೈಸಲಾಗುತ್ತದೆ. ಈ ಯೋಜನೆ ಜಾರಿ ಆದಾಗಿನಿಂದ 8 ರಿಂದ 10 ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ವರದಾ ನೀರು ಹರಿಯುವವರೆಗೆ ತೊಂದರೆ ಇರುವುದಿಲ್ಲ. ಬೇಸಿಗೆಯಲ್ಲಿ ನದಿ ಬರಿದಾಗುತ್ತಿದ್ದಂತೆ ಸಮಸ್ಯೆ ಉಲ್ಭಣಿಸುತ್ತದೆ. ಆಗ 15ರಿಂದ 20 ದಿನಕ್ಕೊಮ್ಮೆ ನೀರು ಎನ್ನುವಂತಾಗುತ್ತದೆ.
ತುರ್ತು ನೀರು ಸರಬರಾಜಿಗೆ ಪಟ್ಟಣದ 27 ವಾರ್ಡ್ಗಳಲ್ಲಿ 80 ಕಿರು ನೀರು ಸರಬರಾಜು ಸ್ಥಾವರ ಸ್ಥಾಪಿಸಲಾಗಿದೆ. ಆದರೆ, ಇವು ಬೋರವೆಲ್ಗಳಲ್ಲಿ ನೀರಿದ್ದಾಗ ಮಾತ್ರ ಉಪಯೋಗ ಬರುತ್ತವೆ. ಹಳೆಯದಾದ ಪೈಪ್ಲೈನ್ನಿಂದಾಗಿ, ಸರಿಯಾದ ಕೊಳವೆ ಮಾರ್ಗ ಹಾಗೂ ನಿಶ್ಚಿತ ಮಾರ್ಗ ಅಳವಡಿಕೆ ಇಲ್ಲದಿರುವುದು ನೀರು ಪೂರೈಕೆಗೆ ದೊಡ್ಡ ಅಡ್ಡಿಯಾಗಿದೆ.
ಪುರಸಭೆ ಅಧಿಕಾರಿಗಳು ನೀರಿನ ಬವಣೆ ಹೆಚ್ಚುವ ಮೊದಲು ಎಚ್ಚೆತ್ತು ಸಿದ್ಧತೆ ಕೈಗೊಳ್ಳುವುದು ಅವಶ್ಯವಾಗಿದೆ. ತಪ್ಪಿದಲ್ಲಿ ನೀರಿಗಾಗಿ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂಬುದು ಸಾರ್ವಜನಿಕರ ಆಕ್ರೋಶದ ಮಾತಾಗಿದೆ. 2000ನೇ ಇಸ್ವಿಯಲ್ಲಿ ನಾಗರಿಕರು ನೀರಿಗಾಗಿ ನಡೆಸಿದ್ದ ಹೋರಾಟ ಕಂದಾಯ ಇಲಾಖೆ, ಪುರಸಭೆ ಕಚೇರಿಗೆ ಬೆಂಕಿ ಹಾಕುವಷ್ಟರಮಟ್ಟಿಗೆ ಉಗ್ರರೂಪ ತಾಳಿದ್ದನ್ನು ಸ್ಮರಿಸಬಹುದು.
ವರದಾ ಹರಿಯುವ 6 ತಿಂಗಳು ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ಸಮಸ್ಯೆ ಇರುವುದಿಲ್ಲ. ಮುಂದಿನ 5-6 ತಿಂಗಳು ಮಾತ್ರ ಕೊಳವೆಬಾವಿ ಆಶ್ರಯಿಸಿ ನೀರು ಸರಬರಾಜು ಅನಿವಾರ್ಯವಾಗಿದೆ. ಆದ್ದರಿಂದ, ಪಟ್ಟಣದಲ್ಲಿ ಅಮೃತ 2.0 ಯೋಜನೆಯಡಿ ನಿರಂತರ ನೀರು ಸರಬರಾಜು ಕೈಗೊಳ್ಳಲು ಯೋಜನೆ ರೂಪಿಸಿ, ಕಾರ್ಯ ಆರಂಭಿಸಲಾಗಿದೆ. | ನಾಗರಾಜ ಮಿರ್ಜಿ, ಪುರಸಭೆ ಮುಖ್ಯ ಇಂಜಿನಿಯರ್ ಜನರು ನೀರಿಗಾಗಿ ಹೋರಾಟ ಮಾಡಿದ್ದಲ್ಲದೆ ಜೀವವನ್ನು ಕೊಟ್ಟಿದ್ದಾರೆ. ಆದರೂ, ಪುರಸಭೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬುದ್ಧಿ ಬರುತ್ತಿಲ್ಲ. ಕನಿಷ್ಠ ಸೌಕರ್ಯದ ಮೊದಲ ಮೆಟ್ಟಿಲು ನೀರು. ಅದನ್ನು ಸರಿಯಾಗಿ ನೀಡಲು ಆಗದ ಪುರಸಭೆಗೆ ಜನರು ಮುತ್ತಿಗೆ ಹಾಕುವುದು ಮಾತ್ರ ಬಾಕಿ ಇದೆ. | ಬಾಹುದೀನ್ ಇನಾಮದಾರ, ಸ್ಥಳೀಯ