ನೀರು ಸರಬರಾಜಿಗೆ ಜಟಾಪಟಿ

tank
Published on

ಹೇಮನಾಥ್ ಪಡುಬಿದ್ರಿ

ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಮೆಸ್ಕಾಂ ನಡುವಿನ ಜಂಗಿ ಕುಸ್ತಿಯಲ್ಲಿ ವಿದ್ಯುತ್ ಸಂಪರ್ಕವಾಗದೆ ಕಡುಬೇಸಿಗೆಯಲ್ಲಿಯೇ ಮುದರಂಗಡಿ ಗ್ರಾಮದ ಸಾಂತೂರು ಹಾಗೂ 3 ಜನವಸತಿ ಪ್ರದೇಶದ 226 ಮನೆಗಳವರು ಕುಡಿಯುವ ನೀರಿನಿಂದ ವಂಚಿತರಾಗುವಂತಾಗಿದೆ.

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಮುದರಂಗಡಿ ಗ್ರಾಮದ ಸಾಂತೂರು ಗ್ರಾಮದಲ್ಲಿ 100 ಲಕ್ಷ ಲೀಟರ್ ಸಾಮರ್ಥ್ಯ ನೀರು ಸರಬರಾಜು ಟ್ಯಾಂಕ್ 2021ರಲ್ಲಿ ನಿರ್ಮಿಸಿ ನೀರು ಪೂರೈಕೆಗಾಗಿ ಕೊಳವೆ ಬಾವಿ ನಿರ್ಮಾಣ ಮಾಡಲಾಗಿತ್ತು.

ವಿದ್ಯುತ್ ಸಂಪರ್ಕಕ್ಕೆ ಅಂದಾಜು ಪಟ್ಟಿ

ವಿದ್ಯುತ್ ಸಂಪರ್ಕಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ಠೇವಣಾತಿ ಪಾವತಿಗೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಲಾಗಿತ್ತು. ಅಂದಾಜುಪಟ್ಟಿಯಂತೆ ಮೊತ್ತವನ್ನು ಇಲಾಖೆ ಮೆಸ್ಕಾಂಗೆ ಪಾವತಿಸಿತ್ತು. ಆದರೆ ಬಳಿಕ ಕೊಳವೆಬಾವಿ ನಿರ್ಮಾಣ ಮಾಡಿರುವ ಜಮೀನು ಖಾಸಗಿಯವರಿಗೆ ಸೇರಿದೆಯೆಂಬ ಆಕ್ಷೇಪದಿಂದ ಕಾಮಗಾರಿ ಹಳ್ಳ ಹಿಡಿಯಿತು. ಮತ್ತೆ ಹೊಸದಾಗಿ ಸರ್ಕಾರಿ ಜಮೀನು ಗುರುತಿಸಿ ಅಲ್ಲಿ ಕೊಳವೆಬಾವಿ ನಿರ್ಮಾಣ ಮಾಡಲಾಯಿತು. ಅಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂನಿಂದ ಮತ್ತೆ ಪರಿಷ್ಕರಿಸಿದ ಅಂದಾಜುಪಟ್ಟಿಯಂತೆ ಹೆಚ್ಚುವರಿ ಮೊತ್ತ ಪಾವತಿಸಬೇಕಾದ ಅನಿವಾರ್ಯತೆ ಇಲಾಖೆಗಾಯಿತು. ಅದರಂತೆ ಮೊತ್ತ ಪಾವತಿಸಿದರೂ ಮೆಸ್ಕಾಂನಿಂದ ಜಿಎಸ್‌ಟಿ ಪಾವತಿಸಬೇಕೆನ್ನುವ ಕ್ಯಾತೆಯಿಂದ ನೀರು ಸರಬರಾಜಿಗೆ ಮತ್ತೆ ಅಡ್ಡಿಯಾಗಿದೆ.

ಬೋರ್ಡ್ ಅಳವಡಿಕೆಯಲ್ಲೂ ಲೋಪ

ಟ್ಯಾಂಕ್ ನಿರ್ಮಾಣಗೊಂಡು 3 ವರ್ಷ ಕಳೆದಿದ್ದು, ಟ್ಯಾಂಕ್ ಬಳಿ ಅಳವಡಿಸಿರುವ ಫಲಕದಲ್ಲಿ ಲೋಪ ಎದ್ದು ಕಾಣುತ್ತಿದೆ. ಮುದರಂಗಡಿ ಗ್ರಾಮದ ಸಾಂತೂರು ಪ್ರದೇಶದಲ್ಲಿ ಅನುಷ್ಠಾನವಾಗಿರುವ ಘಟಕದ ಫಲಕದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಪಂ ಉಡುಪಿ ಗ್ರಾಪಂ ನಿಟ್ಟೆ ಎಂದು ನಮೂದಿಸಿರುವುದು ಅಚ್ಚರಿ.

ಹೆಚ್ಚುವರಿ ಕಂಬ ಅಗತ್ಯ

ಟ್ಯಾಂಕ್ ಬಳಿ ವಿದ್ಯುತ್ ಪರಿವರ್ತಕ ಅಳವಡಿಸಲು ಮೆಸ್ಕಾಂ ಸಿದ್ಧತೆ ಮಾಡಿದೆ. ಕೊಳವೆಬಾವಿ ಇರುವಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಕಂಬ ಅಳವಡಿಸಬೇಕಾಗಿರುವುದರಿಂದ ಠೇವಣಾತಿ ಮೊತ್ತ ಪಾವತಿಸಿದರೂ ಜಿಎಸ್‌ಟಿ ಪಾವತಿಸಬೇಕೆನ್ನುವ ನೆಪದಲ್ಲಿ ಸಂಪರ್ಕ ಕಲ್ಪಿಸಲು ಮೆಸ್ಕಾಂ ಮೀನಮೇಷ ಎಣಿಸುತ್ತಿದೆ. ಇಲಾಖೆಗಳೆರಡರ ತಿಕ್ಕಾಟದಿಂದ ನಲ್ಲಿ ಸಂಪರ್ಕವಾದರೂ ಬೇಸಿಗೆ ಈ ಸಮಯದಲ್ಲಿ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಎರಡೂ ಸರ್ಕಾರಿ ಇಲಾಖೆಗಳೇ ಆಗಿರುವುದರಿಂದ ಯಾವುದೇ ತೊಡಕುಗಳಿದ್ದರೂ ತುರ್ತಾಗಿ ಸರಿಪಡಿಸಿಕೊಂಡು ಜನರಿಗೆ ಅನುಕೂಲಕರವಾಗಿ ಕಾರ್ಯೋನ್ಮುಖವಾಗಬೇಕಿದೆ.

ಆರಂಭದಲ್ಲಿ ತಯಾರಿಸಿದ ಅಂದಾಜು ಪಟ್ಟಿಯಂತೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿತ್ತಾದರೂ ಖಾಸಗಿ ಜಮೀನಿನ ಆಕ್ಷೇಪದಿಂದ ಹಿನ್ನೆಡೆಯಾಗಿತ್ತು. ಇದೀಗ ಪರಿಷ್ಕರಿಸಿದ ಅಂದಾಜು ಪಟ್ಟಿಯಂತೆ ಕಡತ ಮೇಲಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿನ ಆದೇಶ ಬಂದ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಮುಕ್ತುಂ ಹುಸೇನ್ ಮೆಸ್ಕಾಂ ಮುದರಂಗಡಿ ಕಚೇರಿ ಶಾಖಾಧಿಕಾರಿ 8 ಲಕ್ಷಕ್ಕೂ ಅಧಿಕ ಮೊತ್ತ ಆರಂಭಿಕ ಅಂದಾಜು ಪಟ್ಟಿಯಂತೆ ಮೆಸ್ಕಾಂ ಇಲಾಖೆಗೆ ಪಾವತಿಸಲಾಗಿತ್ತು. ಕೊಳವೆಬಾವಿ ನಿರ್ಮಿಸಿರುವ ಜಮೀನ ಗೊಂದಲದಿಂದ ಬೇರೆಡೆ ಮತ್ತೆ ಕೊಳವೆಬಾವಿ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಅಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮರುಪರಿಶೀಲಿಸಿದ ಅಂದಾಜು ಪಟ್ಟಿಯಂತೆ ಹೆಚ್ಚುವರಿ ಮೊತ್ತ 3 ತಿಂಗಳ ಹಿಂದೆ ಮೆಸ್ಕಾಂಗೆ ಪಾವತಿಸಲಾಗಿದೆ. ಆದರೆ ಇದೀಗ ಜಿಎಸ್‌ಟಿ ಪಾವತಿಸಬೇಕೆನ್ನುವ ಬೇಡಿಕೆಯಿಟ್ಟಿರುವ ಮೆಸ್ಕಾಂ ವಿದ್ಯುತ್ ಸಂಪರ್ಕಕ್ಕೆ ಮೀನಮೇಷ ಮಾಡುತ್ತಿದೆ. ಜಿಎಸ್‌ಟಿ ಪಾವತಿಸಲು ನಾವು ಬದ್ಧರಿದ್ದು, ನಿಖರ ಮೊತ್ತದ ಬಗ್ಗೆ ಮಾಹಿತಿ ನೀಡಿದಲ್ಲಿ ಅದನ್ನು ಪಾವತಿಸಲು ಬದ್ಧರಿದ್ದೇವೆ. ಸುನೀಲ್ ಜೆಜೆಎಂ ಸಹಾಯಕ ಇಂಜಿನಿಯರ್ https://www.vijayavani.net/the-lakshamodaka-yagava-is-completed-in-saligrama https://www.vijayavani.net/priority-for-konkan-railway-development

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net