ಕುಂದಾಪುರ, ಬೈಂದೂರು ತಾಲೂಕಲ್ಲಿ ಕುಡಿಯುವ ನೀರಿಗೆ ಅಭಾವ

tanker
ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು.
Published on

ಗಂಗೊಳ್ಳಿ: ಬೇಸಿಗೆ ಹೆಚ್ಚುತ್ತಿದ್ದಂತೆ ನೀರಿನ ಅಭಾವದ ಭೀಕರತೆಯೂ ಹೆಚ್ಚುತ್ತಿದೆ. ಕೆರೆ, ಬಾವಿಗಳು ಬತ್ತುತ್ತಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿಯೂ ನೀರಿನ ಬವಣೆ ಬಿಗಡಾಯಿಸುತ್ತಿದೆ. ಈಗಾಗಲೇ ಉಭಯ ತಾಲೂಕಿನ 8 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಮನೆಗಳಿಗೆ ನೀರು ಸರಬರಾಜು ಮಾಡಲು ಸಿದ್ಧತೆ ನಡೆಯುತ್ತಿದೆ.

ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಒಟ್ಟು 27ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಜಲಮೂಲಗಳಾದ ಮದಗ, ಕೆರೆ, ಹೊಳೆ ಸಾಲು, ತೋಡುಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.

ನೀರು ಪೂರೈಕೆ: ಕುಂದಾಪುರ ತಾಲೂಕಿನ 69 ಗ್ರಾಮಗಳ ಪೈಕಿ 21 ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭಗೊಂಡಿದೆ. ಈ ಪೈಕಿ ಗುಜ್ಜಾಡಿ, ಹೆಮ್ಮಾಡಿ, ಕಟ್‌ಬೇಲ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇದಲ್ಲದೆ ಅಮಾಸೆಬೈಲು, ಕೆದೂರು, ಕೊರ್ಗಿ, 76 ಹಾಲಾಡಿ, ಆಜ್ರಿ, ಕೊಡ್ಲಾಡಿ, ಕೆರಾಡಿ, ಬೆಳ್ಳಾಲ, ವಂಡ್ಸೆ, ಕುಂದಬಾರಂದಾಡಿ, ನೂಜಾಡಿ, ಹಕ್ಲಾಡಿ, ಗಂಗೊಳ್ಳಿ, ತಲ್ಲೂರು, ಹೊಸಂಗಡಿ ಗ್ರಾಮದಲ್ಲಿಯೂ ನೀರಿನ ಸಮಸ್ಯೆಯಿದ್ದು, ಸ್ಥಳೀಯವಾಗಿ ಪಂಚಾಯಿತಿಗಳು ನೀರು ಒದಗಿಸಲು ಪ್ರಯತ್ನಿಸುತ್ತಿವೆ. ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಎಲ್ಲ ಗ್ರಾಪಂ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಯವರನ್ನು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿರುವ ಗ್ರಾಪಂಗಳಲ್ಲಿ ನೀರು ಪೂರೈಸಲು ಸ್ಥಳೀಯಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗ್ರಾಪಂಗಳಿಗೆ ಹೆಚ್ಚಿದ ಆರ್ಥಿಕ ಹೊರೆ

ಉಪ್ಪು ನೀರು ಆವೃತ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿರುವುದಲ್ಲದೆ ಗುಡ್ಡಗಾಡು ಪ್ರದೇಶದಲ್ಲಿ ಬಾವಿಯ ನೀರು ಪಾತಾಳಕ್ಕೆ ಇಳಿದಿದೆ. ಜೆಜೆಎಂ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆ ಹೊಸ ತೆರೆದ ಬಾವಿ ರಚನೆಗೆ ಅನುದಾನ ಒದಗಿಸುತ್ತಿಲ್ಲ. ಗ್ರಾಪಂಗಳಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ನೀರು ಪೂರೈಕೆ ಮಾಡಬೇಕಾದ ಜವಾಬ್ದಾರಿ ಸ್ಥಳೀಯಾಡಳಿತದ ಮೇಲೆ ಬಿದ್ದಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಅನುದಾನ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಹೆಚ್ಚಿನ ಆರ್ಥಿಕ ಹೊರೆ ಗ್ರಾಪಂ ಮೇಲೆ ಬಿದ್ದಿದೆ.

ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರಿನ ಬೇಡಿಕೆ ಬಂದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಶಾಸಕರ ನೇತೃತ್ವದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ತೆರೆದ ಬಾವಿ ನಿರ್ಮಾಣ, ಅನುದಾನ ಒದಗಿಸುವ ಬೇಡಿಕೆ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. - ಡಾ.ರವಿ ಕುಮಾರ್ ಹುಕ್ಕೇರಿ, ಕುಂದಾಪುರ ತಾಪಂ ಕಾರ್ಯನಿರ್ವಾಹಣಾಧಿಕಾರಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾ.ಪಂ.ಗಳಿಂದ ಪ್ರಸ್ತಾವನೆ ಬರಬೇಕೆಂದು ಕಾಯದೆ, ಆಯಾ ಗ್ರಾಪಂಗಳಲ್ಲಿ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಎರಡು ವರ್ಷಗಳ ವರದಿ ಆಧರಿಸಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಗುರುರಾಜ್ ಗಂಟಿಹೊಳೆ, ಶಾಸಕ https://www.vijayavani.net/steps-taken-for-supply-of-towers-and-batteries https://www.vijayavani.net/community-outreach-program-at-hangarakatte-school

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net