ಕುಡಿವ ನೀರಿನ ಶುದ್ಧೀಕರಣ ಘಟಕ ದುರಸ್ತಿ - ಏಜೆನ್ಸಿಗಳಿಗೆ ಅಂತಿಮ ನೋಟಿಸ್ ಜಾರಿ ಮಾಡಿದ ಇಇ

300720 Kushtagi Notice for Water Plants Repair
ಕುಡಿವ ನೀರಿನ ಶುದ್ಧೀಕರಣ ಘಟಕಗಳನ್ನು ದುರಸ್ತಿಗೊಳಿಸುವಂತೆ ಇಲಾಖೆ ನೀಡಿರುವ ಅಂತಿಮ ನೋಟಿಸ್.
Published on

ಕುಷ್ಟಗಿ: ತಾಲೂಕು ಸೇರಿ ಜಿಲ್ಲೆಯ ವಿವಿಧೆಡೆ ಸ್ಥಗಿತಗೊಂಡಿರುವ ಕುಡಿವ ನೀರಿನ ಶುದ್ಧೀಕರಣ ಘಟಕಗಳನ್ನು ದುರಸ್ತಿಗೊಳಿಸಿ ಚಾಲನೆಯಲ್ಲಿಡುವಂತೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್(ಇಇ) ಭರತ್‌ಕುಮಾರ ಅವರು ಪ್ಯಾನ್ ಏಷ್ಯಾ ಹಾಗೂ ವಾಟರ್‌ಲೈಫ್ ಇಂಡಿಯಾ ಹೆಸರಿನ ಏಜೆನ್ಸಿಗಳಿಗೆ ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.

ಸ್ಥಗಿತಗೊಂಡ ಘಟಕಗಳನ್ನು ದುರಸ್ತಿಗೊಳಿಸಿ ಚಾಲನೆಯಲ್ಲಿಡುವಂತೆ ಹಲವು ಬಾರಿ ಸೂಚಿಸಿದರೂ ಉದಾಸೀನ ತೋರಿದ ಏಜೆನ್ಸಿಗಳಿಗೆ ಜು.27 ರಂದು 2ನೇ ಅಂತಿಮ ನೋಟಿಸ್ ಜಾರಿ ಮಾಡಿ ಆ.2 ರೊಳಗೆ ದುರಸ್ತಿಗೊಳಿಸಿ ಚಾಲನೆಯಲ್ಲಿಡುವಂತೆ ಸೂಚಿಸಿದ್ದಾರೆ. ಪುನಃ ನಿರ್ಲಕ್ಷ್ಯ ವಹಸಿದ್ದಲ್ಲಿ ಟೆಂಡರ್ ನಿಯಮಾವಳಿಯಂತೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

56 ಘಟಕಗಳಳು ಸ್ಥಗಿತ: ಜಿಪಂ ಸಿಇಒ ರಘುನಂದನಮೂರ್ತಿ ಜು.17 ರಂದು ಹೊರಡಿಸಿದ ಜ್ಞಾಪನಾ ಪತ್ರದ ಅನುಸಾರ ಗ್ರಾಪಂವಾರು ತಂಡ ರಚಿಸಿ ಶುದ್ಧೀಕರಣ ಘಟಕಗಳ ಸ್ಥಿತಿಗತಿ ಕುರಿತ ವರದಿ ಪಡೆಯಲಾಗಿತ್ತು. ಅದರಂತೆ ಜು.27 ರಂದು ನಡೆದ ಸಭೆಯಲ್ಲಿ ವರದಿ ಪರಿಶೀಲಿಸಿದಾಗ ಪ್ಯಾನ್ ಏಷ್ಯಾ ಏಜೆನ್ಸಿ ಅಳವಡಿಸಿರುವ 39 ಹಾಗೂ ವಾಟರ್‌ಲೈಫ್ ಏಜೆನ್ಸಿ ಅಳವಡಿಸಿರುವ 17 ಸೇರಿ ಒಟ್ಟು 56ಘಟಕಗಳು ಸ್ಥಗಿತಗೊಂಡಿರುವುದು ಕಂಡುಬಂದಿರುತ್ತದೆ. ಅವುಗಳ ಪೈಕಿ ಕುಷ್ಟಗಿ ತಾಲೂಕಿನಲ್ಲಿ 25, ಗಂಗಾವತಿ ತಾಲೂಕಿನಲ್ಲಿ 10, ಕೊಪ್ಪಳ ತಾಲೂಕಿನಲ್ಲಿ 12 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 9ಘಟಕಗಳು ಸ್ಥಗಿತಗೊಂಡಿವೆ. ವರದಿ ಆಧರಿಸಿ ಏಜೆನ್ಸಿಗಳಿಗೆ ನೋಟಿಸ್ ಜಾರಿ ಮಾಡಿರುವ ಇಇ, ಘಟಕಗಳನ್ನು ದುರಸ್ತಿಗೊಳಿಸಿ ಆಯಾ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ)ಗಳಿಂದ ದೃಢೀಕರಿಸಿದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಏಜೆನ್ಸಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ಹಲವು ಶುದ್ಧೀಕರಣ ಘಟಕಗಳು ಸ್ಥಗಿತಗೊಂಡು ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಏಜೆನ್ಸಿಗಳಿಗೆ ಸಭೆಗಳಲ್ಲಿ ಹಾಗೂ ಪತ್ರಗಳ ಮುಖಾಂತರ ಹಲವು ಬಾರಿ ಸೂಚನೆ ನೀಡಿದಾಗ್ಯೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ. ಆ.2ರೊಳಗೆ ದುರಸ್ತಿಗೊಳಿಸದಿದ್ದಲ್ಲಿ ಟೆಂಡರ್ ನಿಯಮಾವಳಿಯಂತೆ ಕ್ರಮ ಕೈಗೊಳ್ಳಲಾಗುವುದು.| ಭರತ್‌ಕುಮಾರ್ ಇಇ, ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net