ನೀರಿಗೆ ಬೇಕಿದೆ 'ವರುಣ' ಕೃಪೆ

Water Problem
ಉಡುಪಿ ನಗರದ ಎತ್ತರದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರಮೇಶ್​ ಕಾಂಚನ್​ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು ಹಾಗೂ ನಗರಸಭಾ ಸದಸ್ಯರು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಶನಿವಾರ ಮನವಿ ನೀಡಿದರು. ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್​ ಪುತ್ತೂರು, ಸಂಧ್ಯಾ ತಿಲಕ್​ರಾಜ್​, ವಿಜಯ್​ ಪೂಜಾರಿ, ಜ್ಯೋತಿ ಹೆಬ್ಬಾರ್​, ಮಮತಾ ಶೆಟ್ಟಿ, ಶಶಿರಾಜ್​ ಕುಂದರ್​, ಜಯಶ್ರೀ ಶೇಟ್​ ಇತರರಿದ್ದರು.
Published on

ಉಡುಪಿಯಲ್ಲಿ ಆರಂಭಗೊಂಡಿದೆ ಜಲ ಯಾತನೆ - ರೇಶನಿಂಗ್​ಗೆ ದಿನ ಗಣನೆ

ಪ್ರಶಾಂತ ಭಾಗ್ವತ, ಉಡುಪಿ

ಜಿಲ್ಲೆಯಲ್ಲಿ ದಿನೇದಿನೆ ಬಿಸಿಲ ತಾಪ ಏರುತ್ತಿದ್ದು, ಜಲಮೂಲಗಳಿಗೂ ಬಿಸಿ ತಟ್ಟಿದೆ. ರಣಬಿಸಿಲಿನ ಭೀಕರತೆಯಿಂದಾಗಿ ಹಳ್ಳ-ಕೊಳ್ಳ, ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದ್ದು, ಹಲವೆಡೆ ಬತ್ತಿ ಹೋಗಿವೆ.
ಉಡುಪಿ ನಗರಸಭಾ ವ್ಯಾಪ್ತಿಯ ಹಾಗೂ ಆಸುಪಾಸಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಬಜೆ ಅಣೆಕಟ್ಟೆಯಲ್ಲಿಯೂ ನೀರು ಬತ್ತುತ್ತಲಿದೆ. ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಇದೀಗ ದಿನವೂ ನೀರು ಪೂರೈಸುವಂತೆ ಅಥವಾ ನೀರಿನ ಸಮಸ್ಯೆ ಹೇಳಿಕೊಂಡು ನೂರಾರು ಕರೆಗಳು ಬರತೊಡಗಿವೆ.

ವಾರಕ್ಕೆ ಆಗುವಷ್ಟಿದೆ ನೀರು

ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಯತೊಡಗಿದೆ. ಗರಿಷ್ಠ 6.30 ಮೀಟರ್​ ಸಾಮರ್ಥ್ಯದ ಡ್ಯಾಂನಲ್ಲಿ ಮೇ 4ರಂದು 3.51 ಮೀಟರ್​ಗೆ ಇಳಿದಿದ್ದು, ಅರ್ಧದಷ್ಟು ಮಾತ್ರ ಇದೆ. ಇದರಲ್ಲಿ ಹೂಳು ತುಂಬಿರುವ ಭಾಗ ಕಳೆದರೆ ಅಂದಾಜು 1ರಿಂದ 1.50 ಮೀಟರ್​ನಷ್ಟೇ ನೀರು ಇದ್ದಿರಬಹುದು. ಪ್ರಸ್ತುತ ಬಜೆ ಡ್ಯಾಂನಿಂದ ಮೇ 10ರ ವರೆಗೆ ಮಾತ್ರ ನೀರು ಪೂರೈಕೆ ಮಾಡಿಕೊಳ್ಳಬಹುದಾಗಿದೆ.

8 ಗ್ರಾಪಂಗೂ ಪೂರೈಕೆ

ಬಜೆ ಡ್ಯಾಂನಿಂದ ಉಡುಪಿ ನಗರಕ್ಕಷ್ಟೇ ಅಲ್ಲದೆ, ನಗರಸಭಾ ವ್ಯಾಪ್ತಿಯಲ್ಲಿರುವ 8 ಗ್ರಾಪಂಗಳಿಗೂ ಇದೇ ಡ್ಯಾಂನಿಂದಲೇ ನೀರು ಪೂರೈಸಲಾಗುತ್ತಿದೆ. ನಗರಗಳಿಗೆ ನೀರು ಪೂರೈಸಲು ಪ್ರತಿದಿನ 27 ಎಂಎಲ್​ಡಿ ನೀರನ್ನು ಬಜೆ ಡ್ಯಾಂನಿಂದ ಬಳಸಲಾಗುತ್ತಿದ್ದು, ಸದ್ಯ ದಿನವೂ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಪಂಗಳಿಗೆ ಪ್ರತಿದಿನದ ಬದಲು ಮೂರು ದಿನಕ್ಕೊಮ್ಮೆ ಕೇವಲ 2 ತಾಸು ಮಾತ್ರ ಕುಡಿಯುವ ನೀರು ಬಿಡಲಾಗುತ್ತಿದೆ.

ದಿನವೂ ಜನರ ಪರದಾಟ

ಉಡುಪಿ ನಗರದಲ್ಲಿ ದಿನವೂ ಕುಡಿಯುವ ನೀರು ಪೂರೈಕೆ ಆಗುತ್ತಿದ್ದರೂ ಎತ್ತರದ ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ಸಮರ್ಪಕವಾಗಿ ಈಗ ತಲುಪುತ್ತಿಲ್ಲ. ಹೀಗಾಗಿ ಈ ಭಾಗದ ಜನರು ದಿನವೂ ಕುಡಿಯುವ ನೀರಿಗೆ ಪರದಾಟ ನಡೆಸುವಂತಾಗಿದೆ. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡುವಂತೆ ಈ ಭಾಗದ ಜನರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ನೀಡತೊಡಗಿದ್ದಾರೆ.

24 ಗಂಟೆಯಲ್ಲಿ ನೀರು ಪೂರೈಕೆಗೆ ಕ್ರಮ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂಬ ಕಾರಣಕ್ಕೆ ಕಳೆದ ಏಪ್ರಿಲ್​ 29ರಂದು ಜಿಲ್ಲೆಯ ಎಲ್ಲ ಪ್ರಮುಖ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿ ಚರ್ಚಿಸಿದ್ದರು. ಜಿಲ್ಲೆಯ ನಗರಸಭೆಗಳ ವ್ಯಾಪ್ತಿಯಲ್ಲಿ ಬೈಂದೂರು ಬಿಟ್ಟರೆ ಬೇರೆಲ್ಲೂ ಸದ್ಯಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಬೈಂದೂರಿನ ಒಂದು ಗ್ರಾಮದ ವ್ಯಾಪ್ತಿಯಲ್ಲಿ ಉಪ್ಪು ನೀರು ಬಂದಿರುವುದರಿಂದ ಇಲ್ಲಿ ಮಾತ್ರ ಟ್ಯಾಂಕರ್​ ನೀರು ಪೂರೈಕೆ ಮಾಡಲಾಗುತ್ತಿದೆ. ಬ್ರಹ್ಮಾವರದ ಕಳತ್ತೂರು, ಕೊಕ್ಕರ್ಣೆ, ಕರ್ಜೆ ಹಾಗೂ ಹೆಬ್ರಿ ತಾಲೂಕಿನ ಬೆಳ್ವೆ, ಮುದ್ರಾಡಿಯಲ್ಲಿ ಮಾತ್ರ ಸದ್ಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿ ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ದೂರು ಬಂದಲ್ಲಿ 24 ಗಂಟೆಯೊಳಗೆ ಆ ಪ್ರದೇಶಕ್ಕೆ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮುಂದಿನ ಹತ್ತು ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮಳೆ ಬರುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯಿಂದ ಮಾಹಿತಿ ಇದೆ. ಮಳೆ ಬಂದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದು. ಮಳೆ ಬರದಿದ್ದಲ್ಲಿ ಸಹಜವಾಗಿಯೇ ನೀರು ಪೂರೈಕೆಗೆ ಸಂಬಂಧಿಸಿ ರೇಶನಿಂಗ್​ ಅನಿವಾರ್ಯವಾಗಲಿದೆ. ಸಾರ್ವಜನಿಕರೂ ಸಹ ಮಿತವಾಗಿ ನೀರು ಬಳಕೆ ಮಾಡಬೇಕು. ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net