

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ತೀವ್ರಗೊಂಡಿದೆ. ಮುಂಗಾರು ವಿಳಂಬ ಜತೆಗೆ ಮುಂಗಾರು ಪೂರ್ವ ಮಳೆ ಕೊರತೆಯಿಂದ ಕರಾವಳಿಯ ಬಹುತೇಕ ಕಡೆ ನೀರಿನ ಸಮಸ್ಯೆ ಉದ್ಬವವಾಗಿದೆ.
ಒಂದುಕಡೆ ಶಾಲಾ-ಕಾಲೇಜುಗಳಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುತ್ತಿದ್ದು, ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲೂ ನೀರಿನ ಅಭಾವ ಎದುರಾಗಿದೆ.
ಎರಡು ದಿನದ ಹಿಂದೆ ಎಎಂಆರ್‌ನಿಂದ ತುಂಬೆಗೆ ನೀರು ಬಿಡುಗಡೆಗೊಂಡಿದ್ದು, ಬುಧವಾರ ಸಂಜೆ ತುಂಬೆ ಡ್ಯಾಂ ಮಟ್ಟ 4 ಮೀಟರ್‌ಗೆ ಏರಿಕೆಯಾಗಿದೆ. ಇದರಿಂದ ಕಳೆದ ಕೆಲವು ದಿನಗಳಿಂದ ಪಾಣೆಮಂಗಳೂರು ಭಾಗದಲ್ಲಿ ಬಯಲಿನಂತಾಗಿದ್ದ ನೇತ್ರಾವತಿ ನದಿಯಲ್ಲಿ ಮತ್ತೆ ನೀರು ತುಂಬಿಕೊಂಡಿದೆ. ಡ್ಯಾಂ ಮಟ್ಟ ಏರಿಕೆಯಾದರೂ ಮಂಗಳೂರು ಹಾಗೂ ಸುರತ್ಕಲ್ ವ್ಯಾಪ್ತಿಗೆ ಯಥಾಸ್ಥಿತಿಯಲ್ಲಿ ರೇಷನಿಂಗ್‌ನಂತೆಯೇ ನೀರು ಪೂರೈಕೆಯಾಗಲಿದೆ. ಜೂನ್ 5ರ ಸಂಜೆ ತುಂಬೆ ನೀರಿನ ಮಟ್ಟ 1.8 ಮೀ.ಗೆ ಇಳಿದು ಇತಿಹಾಸದಲ್ಲೇ ಮೊದಲ ಬಾರಿ ಕನಿಷ್ಠ ಇಳಿಕೆ ದಾಖಲಾಗಿದೆ. ಜತೆಗೆ ಹರೇಕಳ ಡ್ಯಾಂನಿಂದ ಪ್ರತಿದಿನ 50ರಿಂದ 60 ಎಂಎಲ್‌ಡಿ ನೀರು ತುಂಬೆ ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ. ಮಂಗಳೂರಿಗೆ ನಿತ್ಯ 160 ಎಂಎಲ್‌ಡಿ ನೀರು ಸರಬರಾಜು ಮಾಡುವ ಕಾರಣದಿಂದ ಶೇ.40ರಷ್ಟು ನೀರು ಡ್ಯಾಂನ ಕೆಳಭಾಗದಿಂದ ಪಡೆಯಲಾಗುತ್ತಿತ್ತು. ತುಂಬೆ ಡ್ಯಾಂ 4 ಮೀವರೆಗೆ ಏರಿರುವ ಹಿನ್ನೆಲೆಯಲ್ಲಿ ಹರೇಕಳ ಡ್ಯಾಂನಿಂದ ಪಂಪಿಂಗ್ ಕಾರ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಶೇಖರಣೆಗೊಂಡ ತುಂಬೆ ಡ್ಯಾಂ ನೀರು ಮುಂದಿನ 25 ದಿನಗಳ ವರೆಗಿನ ಪೂರೈಕೆಗೆ ಸಾಕಾಗಬಹುದು ಎಂದು ಮನಪಾ ಆಯುಕ್ತ ಚನ್ನಬಸಪ್ಪ ತಿಳಿಸಿದ್ದಾರೆ.
ಮಂಗಳೂರಿನ ಪ್ರಮುಖ ವಿದ್ಯಾಸಂಸ್ಥೆ ಹಾಗೂ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ನಗರದ ಕೂಳೂರು, ಪಣಂಬೂರು, ಲಾಲ್‌ಬಾಗ್ ಸೇರಿದಂತೆ ಪ್ರಮುಖ ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ನೀರು ಅನಿವಾರ್ಯವಾಗಿದೆ. ನೀರಿನ ಬೇಡಿಕೆ ಹೆಚ್ಚಾದಂತೆ ಟ್ಯಾಂಕರ್ ಮಾಲೀಕರೂ ಹೆಚ್ಚುವರಿ ವಸೂಲಿಯಲ್ಲಿ ತೊಡಗಿದ್ದಾರೆ. ಕೊಳವೆ ಬಾವಿ ಸಹಿತ ನದಿಯಿಂದ ನೀರು ತಂದು ಮಂಗಳೂರು ಭಾಗದಲ್ಲಿ ಹಂಚುವ ಟ್ಯಾಂಕರ್‌ಗಳು ಈಗ ಬ್ಯುಸಿಯಾಗಿದ್ದು, ಬಹುತೇಕರ ಪೋನ್ ಕರೆಗೂ ಸಿಗುತ್ತಿಲ್ಲ.
ಜಿಲ್ಲೆಯ 50ಕ್ಕೂ ಅಧಿಕ ಶಾಲೆಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಮೂಲ್ಕಿಯ ಮೂರು ಹಾಗೂ ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ಮಾತ್ರ ನೀರು ಸಿಗುತ್ತಿದೆ. ಪುತ್ತೂರು, ಬಂಟ್ವಾಳದ ಹಲವು ಶಾಲೆಗಳು ಮಧ್ಯಾಹ್ನದ ನಂತರ ಅನಿವಾರ್ಯವಾಗಿ ರಜೆ ನೀಡುತ್ತಿವೆ. ನೀರಿನ ಕೊರತೆಯಿರುವ ವಿದ್ಯಾಸಂಸ್ಥೆಗಳಿಗೆ ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಜಿಪಂ ಸೂಚನೆ ನೀಡಿದ್ದರೂ ಬಹುತೇಕ ಪಂಚಾಯಿತಿಗಳಲ್ಲೇ ನೀರಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಅಧೀನದ ಹಾಸ್ಟೆಲ್, ಕಾಲೇಜುಗಳಿಗೆ ನೀರಿನ ಬಿಸಿ ತಟ್ಟಿದ್ದು, 1 ವಾರಗಳ ಹಾಜರಿ ಸಹಿತ ರಜೆ ನೀಡುತ್ತಿವೆ.
ಮಂಗಳೂರಿನಲ್ಲಿರುವ ಬಹುತೇಕ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ನೀರಿನ ಕೊರತೆಯಿಂದ ಸದ್ಯಕ್ಕೆ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂಆರ್‌ಪಿಎಲ್‌ನಂತಹ ಬೃಹತ್ ಸಂಸ್ಥೆಗಳು ಸ್ವಂತ ನೀರಿನ ಸಂಪನ್ಮೂಲ ಹೊಂದಿರುವುದರಿಂದ ಇಲ್ಲಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಿಲ್ಲ. ಸುರತ್ಕಲ್ ವ್ಯಾಪ್ತಿಯ ಬಹುತೇಕ ಸಂಸ್ಥೆಗಳಿಗೆ ಎಂಆರ್‌ಪಿಎಲ್‌ನಿಂದ ನೀರು ಸರಬರಾಜಾಗುತ್ತಿದ್ದು, ನೀರಿನ ಕೊರತೆಯಿಂದ ಪ್ರಮುಖ ಕೈಗಾರಿಕೆಗಳು ಚಟುವಟಿಕೆ ಸ್ಥಗಿತಗೊಳಿಸಿದೆ.
ದ.ಕ. ಜಿಲ್ಲೆಯ ಕೆಲವು ಕಡೆಯಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮ ಪಂಚಾಯಿತಿಯ ಮೂಲಕ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ಅನಿವಾರ್ಯ ಕಡೆಗಳಲ್ಲಿ ಕೊಳವೆ ಬಾವಿ ಕೊರೆಯಲು ಸೂಚನೆ ನೀಡಲಾಗಿದೆ. ನೀರಿನ ಮೂಲಗಳಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. - ಡಾ.ಕುಮಾರ, ಜಿಪಂ ಸಿಇಒ https://www.vijayavani.net/water-shortage-for-road-development-work