ಚರಂಡಿಯೊಳಗೆ ಕುಡಿಯುವ ನೀರಿನ ಪೈಪ್‌ಲೈನ್

ಗುಂಡ್ಲುಪೇಟೆ ಪಟ್ಟಣದ ಚಾಮರಾಜನರದ ರಸ್ತೆಯ ಚರಂಡಿಯ ಒಳಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುತ್ತಿರುವ ವಿರುದ್ಧ ನಮ್ಮ ಕರ್ನಾಟಕ ಸೇನೆ ಪದಾದಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು,
ಗುಂಡ್ಲುಪೇಟೆ ಪಟ್ಟಣದ ಚಾಮರಾಜನರದ ರಸ್ತೆಯ ಚರಂಡಿಯ ಒಳಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುತ್ತಿರುವ ವಿರುದ್ಧ ನಮ್ಮ ಕರ್ನಾಟಕ ಸೇನೆ ಪದಾದಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು,
Published on

 ಗುಂಡ್ಲುಪೇಟೆ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕಬಿನಿ ಎಕ್ಸ್‌ಪ್ರೆಸ್ ಯೋಜನೆಯ ಪೈಪ್‌ಲೈನ್ ಅನ್ನು ಚರಂಡಿಯ ಒಳಗೆ ಅಳವಡಿಸುತ್ತಿರುವ ಕಾಮಗಾರಿ ವಿರುದ್ಧ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಜಲಮಂಡಲಿ ವತಿಯಿಂದ ಪಟ್ಟಣದ ಮನೆ ಮನೆಗಳಿಗೆ ನೀರು ಪೂರೈಸುವ ಎಕ್ಸ್‌ಪ್ರೆಸ್ ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯ ಮೋರಿಯ ಡೆಕ್ ಕೆಳಭಾಗದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸುತ್ತಿರುವ ಬಗ್ಗೆ ಮಂಗಳವಾರ ಗಮನಕ್ಕೆ ಬಂದು ಕೂಡಲೇ ಸಂಘಟನೆ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಕಸ್ಮಾತ್ ಪೈಪ್ ಒಡೆದರೆ ಕೊಳಚೆ ನೀರು ಬೆರೆತು ಮನೆಗಳಿಗೆ ಪೂರೈಕೆಯಾಗಲಿದೆ. ಇದರ ಅರಿವಿಲ್ಲದ ಸಾರ್ವಜನಿಕರು ನೀರನ್ನು ಸೇವಿಸಿದರೆ ದೊಡ್ಡ ಅನಾಹುತ ಸಂಭವಿಸಲಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ರಸ್ತೆಬದಿಯಲ್ಲಿ ಮಾತ್ರ ಪೈಪ್ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದು ಕಾಮಗಾರಿಗೆ ತಡೆಯೊಡ್ಡಿದರು. ಅಕಸ್ಮಾತ್ ಕಾಮಗಾರಿ ಮುಂದುವರೆಸಿದರೆ ಕರ್ನಾಟಕ ಸೇನೆಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಮಂಜುನಾಥ್ ಚರಂಡಿಯ ಒಳಗೆ ಅಳವಡಿಸಿದ್ದ ಪೈಪ್ ಲೈನ್ ತೆರವುಗೊಳಿಸಿದರು. ಸಂಘಟನೆಯ ತಾಲೂಕು ಅಧ್ಯಕ್ಷ ಶ್ರೀನಿವಾಸ್ ನಾಯಕ್, ಗೌರವಾಧ್ಯಕ್ಷರು ಅಬ್ದುಲ್ ಮಾಲಿಕ್, ತಾಲೂಕು ಉಪಾಧ್ಯಕ್ಷ ನಟರಾಜ ಗೌಡ, ರಘು ಗೌಡ, ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net