ನೀರನ್ನು ಪರೀಕ್ಷೆಗೊಳಪಡಿಸುವುದು ಕಡ್ಡಾಯ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚನೆ

Drinking Water Management Committee Meeting Mandya
Published on

ಮಂಡ್ಯ: ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆಯಿದೆ. ಆದ್ದರಿಂದ ಯಾವುದೇ ಪರಿಸ್ಥಿಯಲ್ಲೂ ಕುಡಿಯುವ ನೀರು ಪೂರೈಕೆ ವೇಳೆ ಅಡಚಣೆಯಾಗದಂತೆ ನೋಡಿಕೊಳ್ಳಿ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿಯುವ ನೀರಿನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನ ನಡೆಯುವ 3 ದಿನ ಮುಂಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಹಾಗೂ ನೀರನ್ನು ಸಂಗ್ರಹ ಮಾಡುವ ಟ್ಯಾಂಕರ್ ಹಾಗೂ ನೀರನ್ನು ಪರೀಕ್ಷೆಗೆ ಒಳಪಡಿಸಿ ಶುದ್ಧ ನೀರು ಸಂಗ್ರಹಣೆಗೆ ಆದ್ಯತೆ ನೀಡಬೇಕು. ನೀರು ಪೋಲಾಗದಂತೆ ಗಮನಹರಿಸಿ. ಈಗಾಗಲೇ ಎಲ್ಲೆಲ್ಲಿ ನೀರಿನ ಪಾಯಿಂಟ್‌ಗಳಿವೆಯೋ ಅಲ್ಲಲ್ಲಿ ವ್ಯವಸ್ಥಿತವಾಗಿ ಪೈಪ್ ಲೈನ್ ಕಾರ್ಯ ಕೈಗೊಳ್ಳಿ ಎಂದು ಸೂಚಿಸಿದರು.

ಕುಡಿಯಲು, ಅಡುಗೆ ಮಾಡಲು ಮತ್ತು ಶೌಚಕ್ಕೆ ಕ್ರಮ ಬದ್ಧವಾಗಿ ನೀರು ಪೂರೈಕೆ ಮಾಡಬೇಕು. ನೀರೊದಗಿಸಲು ಆಯ್ಕೆ ಮಾಡಲಾದ 2 ಟ್ಯಾಂಕ್‌ಗಳಿಗೆ 4 ಲಕ್ಷ ಲೀಟರ್ ಸಂಗ್ರಹಿಸುವ ಸಾಮರ್ಥ್ಯವಿದೆ. ಈ ಟ್ಯಾಂಕ್‌ಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ನೀರು ಒದಗಿಸಲು ಕ್ರಿಯಾಯೋಜನೆ ರೂಪಿಸಿ ನೀರು ಪೂರೈಸಬೇಕು. ಈಗಾಗಲೇ ಸಮ್ಮೇಳನ ಅಗತ್ಯತೆಗೆ 10 ರಿಂದ 15 ನೀರಿನ ಪಾಯಿಂಟ್ ತೆರೆಯಲು ನಿರ್ಧರಿಸಲಾಗಿದೆ. ವಾಹನ ಪಾರ್ಕಿಂಗ್ ಹಾಗೂ ಇನ್ನಿತರೆ ಸ್ಥಳದಲ್ಲಿ ಸ್ಥಾಪಿಸಲಾಗುವ ಶೌಚಗೃಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ಶೌಚಗೃಹ ಹಾಗೂ ಕುಡಿಯುವ ನೀರಿನ ಪಾಯಿಂಟ್ ಸ್ಥಾಪಿಸುವ ಸ್ಥಳದಲ್ಲಿ ಬೀದಿ ದೀಪ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಿ ಎಂದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ಸಿ.ಸುರೇಶ್ ಮಾತನಾಡಿ, ನೀರು ಪೂರೈಕೆಗೆ 10 ರಿಂದ 15 ಪಾಯಿಂಟ್ ಹಾಕಿಕೊಳ್ಳಲಾಗಿದೆ. ಪ್ರತಿ ಪಾಯಿಂಟ್‌ಗೆ 10 ರಿಂದ 15 ನಲ್ಲಿ ಹಾಕಲಾಗುತ್ತದೆ. ಇದರೊಂದಿಗೆ 1000 ನೀರಿನ ಕ್ಯಾನ್ ಪೂರೈಸಲು ಕ್ರಿಯಾಯೋಜನೆ ಹಾಕಿಕೊಳ್ಳಲಾಗಿದೆ. ನಗರದಲ್ಲಿನ 3 ನೀರಿನ ಟ್ಯಾಂಕ್ ಹಾಗೂ ಸ್ಥಳೀಯ ಬೋರ್‌ವೆಲ್ಗಳಿಂದ ನೀರು ಪೂರೈಕೆ ಮಾಡಲು ವ್ಯವಸ್ಥೆಯಾಗಿದೆ. ಜತೆಗೆ ನೀರಿನ ಟ್ಯಾಂಕ್ ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಪ್ರಮೋದ್‌ಕುಮಾರ್, ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಎಸ್.ನಾಗರಾಜ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಬಾಬಾಸಾಬ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net