

ಮಂಡ್ಯ: ಮಂಡ್ಯ ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿದಿನ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಚ್ಚರವಹಿಸಿ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದ ಕುಡಿಯುವ ನೀರಿನ ನಿರ್ವಹಣಾ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರು ಒದಗಿಸಬೇಕಿರುವ ಸ್ಥಳಗಳನ್ನು ಗುರುತಿಸಬೇಕು ಎಂದರು.
ಸಮ್ಮೇಳನ ಸ್ಥಳದಲ್ಲಿರುವ ಟ್ಯಾಂಕ್ ದುರಸ್ಥಿಗೊಳಿಸಿ ಎರಡು ಬೋರವೆಲ್‌ಗಳಿಂದ ಪಂಪ್‌ಮಾಡಿ ಅದನ್ನು ಶುದ್ಧೀಕರಣ ಮಾಡಿ ನಂತರ ನೀರಿನ ವ್ಯವಸ್ಥೆಯನ್ನು ಒಂದು ಪಾಯಿಂಟ್‌ನಲ್ಲಿ 10 ನಲ್ಲಿಗಳಂತೆ 15 ಪಾಯಿಂಟ್‌ಗಳಲ್ಲಿ ಕುಡಿಯುವ ನೀರನ್ನು ಸಂಪರ್ಕಿಸಲು ಯೋಜನೆ ರೂಪಿಸಿ. ಅಡುಗೆ ಮಾಡಲು ಸಹ ನೀರು ಒದಗಿಸಬೇಕಿದ್ದು, ಶುದ್ಧೀಕರಿಸಿದ ನೀರನ್ನು ಟ್ಯಾಂಕರ್ ಮೂಲಕ ನೀಡಬೇಕು. ಮನ್ಮುಲ್ನಿಂದ ಬೇಕಿರುವ ಟ್ಯಾಂಕರ್‌ಗಳನ್ನು ಲೆಕ್ಕ ಮಾಡಿ ಪತ್ರ ಬರೆಯಬೇಕು. ಮೈಷುಗರ್ ಫ್ಯಾಕ್ಟರಿ ಸ್ಥಳದಲ್ಲಿರುವ ಬೋರ್‌ವೆಲ್ ಸಹ ಬಳಸಿಕೊಳ್ಳಬಹುದಾಗಿದ್ದು, ಈ ನೀರನ್ನು ಸಹ ಶುದ್ಧಿಕರಣ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಉಪಯೋಗಿಸಿಕೊಳ್ಳಲು ತಿಳಿಸಿದರು.
ವಸ್ತುಪ್ರದರ್ಶನ ಮಳಿಗೆ ಮತ್ತು ನೋಂದಣಿ ಕೇಂದ್ರಗಳಲ್ಲಿ ನೀರಿನ ಕ್ಯಾನ್ ಉಪಯೋಗಿಸಿಕೊಳ್ಳುವುದು ಸೂಕ್ತ. ಪೇಪರ್ ಲೋಟಗಳನ್ನು ಸಹ ಈ ಸ್ಥಳದಲ್ಲಿ ನೀರು ಕುಡಿಯಲು ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅದರಂತೆ ಅಡುಗೆ ಹಾಗೂ ಸಾಮಾನ್ಯ ಬಳಕೆಗೆ ಪ್ರತ್ಯೇಕವಾಗಿ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿ. ನೀರಿನ ಬಳಕೆ ಹಾಗೂ ಸ್ವಚ್ಛತೆ ಎರಡನ್ನು ಗಮನದಲ್ಲಿಟ್ಟುಕೊಂಡು ಪೈಪ್‌ಲೈನ್ ನಿರ್ಮಿಸಬೇಕು. ಏಕೆಂದರೆ ಎಲ್ಲೆಂದರಲ್ಲಿ ನೀರು ಪೋಲಾಗುವುದನ್ನು ತಡೆಗಟ್ಟುವುದರಿಂದಿಗೆ ಜನದಟ್ಟಣೆ ನಿಯಂತ್ರಿಸಬಹುದು ಎಂದರು.
ಕಾರ್ಯಪಾಲಕ ಇಂಜಿನಿಯರ್ ಪ್ರಮೋದ್‌ಕುಮಾರ್ ಮಾತನಾಡಿ, ಕುಡಿಯುವ ನೀರಿನ ನಿರ್ವಹಣಾ ಸಮಿತಿಗೆ 50 ಲಕ್ಷ ರೂ ಆಯವ್ಯಯ ನಿಗದಿಯಾಗಿದೆ. ಇದರಲ್ಲಿ ಯೋಜನೆ ರೂಪಿಸಬೇಕಿದೆ. ನಗರ ನೀರು ಸರಬರಾಜು ಇಲಾಖೆ ವತಿಯಿಂದ ಶುದ್ಧ ಕಾವೇರಿ ನೀರನ್ನು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲು 25 ಲಕ್ಷ ರೂ ಅನುದಾನ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ಸಿ.ಸುರೇಶ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಜಯಪ್ರಕಾಶ್, ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಎಸ್,ನಾಗರಾಜ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಬಾಬಾ ಸಾಬ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಇತರರಿದ್ದರು.