ಡಿಸೆಂಬರ್​ ಅಂತ್ಯಕ್ಕೆ ವಾರಾಹಿಯಿಂದ ಕುಡಿಯುವ ನೀರು?

UDP-19-4-Varahi
Published on

ಅಂತೂ ಮುಗಿಯುವ ಹಂತಕ್ಕೆ ಕಾಮಗಾರಿ

ಉಡುಪಿ ನಗರದಲ್ಲಿ ಪೈಪ್​ಲೈನ್​ ಅಳವಡಿಕೆ

ಪ್ರಶಾಂತ ಭಾಗ್ವತ, ಉಡುಪಿ
ಅಂತೂ ಇಂತೂ ದಿಬ್ಬಣ ಬಂತು ಎಂಬ ಮಾತಿನಂತೆ ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಕುಡಿಯುವ ನೀರು ಹರಿದು ಬರುವುದು ದಿಟ ಎಂಬಂತಾಗಿದೆ. ಡಿಸೆಂಬರ್​ ಅಂತ್ಯಕ್ಕೆ ನಗರ ವಾಸಿಗರಿಗೆ ಕುಡಿಯುವ ನೀರು ಲಭಿಸುವ ಸಾಧ್ಯತೆ ಇದೆ.

ವರ್ಷದ ವಿಳಂಬದ ಬಳಿಕ ವಾರಾಹಿ ನದಿಯಿಂದ ಕುಡಿಯುವ ನೀರು ಪೂರೈಸುವ ಪೈಪ್​ಲೈನ್​ ಅಳವಡಿಕೆ ಕಾಮಗಾರಿ ಉಡುಪಿಯಲ್ಲಿ ಭರದಿಂದ ಸಾಗಿದೆ. ಶೇ. 95ರಷ್ಟು ಕಾಮಗಾರಿ ಮುಗಿದಿರುವುದಾಗಿ ಮಾಹಿತಿ ಲಭಿಸಿದೆ.

ಏನಿದು ಯೋಜನೆ?

ಉಡುಪಿ ನಗರಕ್ಕೆ ಈಗಾಗಲೇ ಬಜೆ ಡ್ಯಾಂನಿಂದ ಪ್ರತಿನಿತ್ಯ 28 ಎಂಎಲ್​ಡಿ ನೀರು ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ನಿಗದಿತ ಸಮಯದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಬಜೆ ಡ್ಯಾಂನಲ್ಲಿ ನೀರು ಖಾಲಿಯಾಗುವುದರಿಂದ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗುತ್ತಿತ್ತು. ಹೀಗಾಗಿ ವಾರಾಹಿ ನದಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ.

UDP-19-4A-Varahi
ಉಡುಪಿಯಲ್ಲಿ ನಡೆಯುತ್ತಿರುವ ಪೈಪ್​ ಜೋಡಣೆ ಕಾಮಗಾರಿ.

ಆರಂಭದಲ್ಲೇ ಕರೊನಾ ಅಡ್ಡಿ

2021ರಲ್ಲಿ ವಾರಾಹಿಯಿಂದ ಉಡುಪಿಗೆ ನೀರು ಪೂರೈಕೆ ಯೋಜನೆಗೆ ಸರ್ಕಾರ ಸಮ್ಮತಿ ನೀಡಿ, ಅನುದಾನವೂ ಬಿಡುಗಡೆ ಆಗಿತ್ತು. ಆದರೆ, ಯೋಜನೆ ಆರಂಭದಲ್ಲೇ ಕರೊನಾ ವೈರಸ್​ನಿಂದಾಗಿ ಹಿನ್ನಡೆ ಉಂಟಾಯಿತು. ಬಳಿಕವೂ ಈ ಕಾಮಗಾರಿ ಆಮೆಗತಿಯಲ್ಲೇ ಸಾಗಿತ್ತು. ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ಕರೆದು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದರು.

45 ಎಂಎಲ್​ಡಿ ನೀರು

2023ರಲ್ಲಿ ಮುಗಿಯಬೇಕಿದ್ದ ಕಾಮಗಾರಿ 2024ರ ಡಿಸೆಂಬರ್​ ಅಂತ್ಯಕ್ಕೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ನಗರಾಭಿವೃದ್ಧಿ ಇಲಾಖೆ (ಕೆಯುಡಿಎಫ್​ಸಿ)ಯ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ವಾರಾಹಿ ನದಿಯಿಂದ ನಿತ್ಯ 45 ಎಂಎಲ್​ಡಿ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಉಡುಪಿ ನಗರ ಭಾಗದಲ್ಲಿ 250 ಕಿಮೀ ವಿತರಣಾ ಜಾಲದಲ್ಲಿ ಈಗಾಗಲೇ 215 ಕಿಮೀ ಮುಗಿದಿದೆ. ಹಾಲಾಡಿಯಿಂದ ಉಡುಪಿಗೆ (38 ಕಿಮೀ) ಎಂಎಸ್​ ಪೈಪ್​ ಹಾಗೂ ಉಡುಪಿ ನಗರದಲ್ಲಿ ಎಚ್​ಡಿಪಿಇ ಪೈಪ್​ ಜೋಡಣೆ ಕಾಮಗಾರಿ ನಡೆದಿದೆ ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ಅರ್ಕೇಶ್​ ಗೌಡ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

UDP-19-4B-Varahi

ಕಾಮಗಾರಿಗೆ 252 ಕೋಟಿ ರೂ. ವೆಚ್ಚ

ವಾರಾಹಿಯಿಂದ ನೀರು ಪೂರೈಕೆ ಮಾಡಲು ಮೂರು ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮೂರು ಸಂಸ್ಥೆಗಳು ಕಾಮಗಾರ ಕೈಗೊಂಡಿವೆ. ಮೊದಲ ಹಂತದಲ್ಲಿ ಹಾಲಾಡಿಯಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಾಣ, 2ನೇ ಹಂತದಲ್ಲಿ ಅಲ್ಲಿಂದ ಉಡುಪಿ ನಗರಕ್ಕೆ ಪೈಪ್​ಲೈನ್​ ಜೋಡಿಸುವ ಕಾರ್ಯ ಹಾಗೂ 3ನೇ ಹಂತದಲ್ಲಿ ಉಡುಪಿಯಲ್ಲಿ ವಿತರಣಾ ಜಾಲ ಮತ್ತು ನಳ ಸಂಪರ್ಕದ ಕಾಮಗಾರಿ ನಡೆದಿದೆ. ಹೈದರಾಬಾದ್​ನ ಡಿಆರ್​ಎಸ್​ ಸಂಸ್ಥೆ, ಮುಂಬಯಿಯ ಎಸ್​ಎಂಸಿ ಸಂಸ್ಥೆ ಹಾಗೂ ಪ್ರಾನ್ಸ್​ ದೇಶದ ಸೂಯೆಝ್​ ಸಂಸ್ಥೆ ಟೆಂಡರ್​ ಪಡೆದಿದೆ. ಮೊದಲ ಹಂತಕ್ಕೆ 50 ಕೋಟಿ ರೂ. 2ನೇ ಹಂತಕ್ಕೆ 106 ಕೋಟಿ ರೂ. ಹಾಗೂ 3ನೇ ಹಂತಕ್ಕೆ 96 ಕೋಟಿ ರೂ. ಸೇರಿ ಒಟ್ಟು 252 ಕೋಟಿ ರೂ. ವೆಚ್ಚವಾಗಲಿದೆ.

ಬಜೆ ಡ್ಯಾಂನಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಇದೀಗ ವಾರಾಹಿ ನದಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿಯೂ ಮುಗಿಯುವ ಹಂತಕ್ಕೆ ಬಂದಿದ್ದು, ಡಿಸೆಂಬರ್​ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಈ ಯೋನೆಯಿಂದ ಅನುಕೂಲ ಆಗಲಿದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net