16 ಗ್ರಾಮಗಳಿಗೆ ಕುಡಿಯುವ ನೀರು : 207 ಕೋಟಿ ರೂ. ಯೋಜನೆ ಅನುಷ್ಠಾನ : ಸಹಾಯಕ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಮಾಹಿತಿ

New Project (29)
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಸರ್ಕಾರದ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಮೂರು ತಾಲೂಕುಗಳ 16 ಗ್ರಾಮಗಳಿಗೆ 207 ಕೋಟಿ ರೂ.ನಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ತಿಳಿಸಿದರು.

ಗ್ರಾ.ಪಂ ಕಚೇರಿಯಲ್ಲಿ ಅಧ್ಯಕ್ಷೆ ಲಲಿತ ಉಪಸ್ಥಿತಿಯಲ್ಲಿ ಕರೆದ ಬಹುಗ್ರಾಮ ಯೋಜನೆಯ ನೀರು ಪೂರೈಕೆ ವಿಚಾರದ ಕುರಿತಂತೆ ಕರೆದ ಸಭೆಯಲ್ಲಿ ಯೋಜನೆಯ ವಿವರಣೆ ನೀಡಿದರು.

ಪುತ್ತೂರು ತಾಲೂಕಿನ ಬಜತ್ತೂರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಳ್ತಂಗಡಿ ತಾಲೂಕಿನ ಕೊಕ್ಕಡ, ನಿಡ್ಲೆ, ಪಟ್ರಮೆ, ಕಳಂಜ, ಕಡಬ ತಾಲೂಕಿನ ಸವಣೂರು, ಬೆಳಂದೂರು, ಪೆರಾಬೆ, ಅಲಂಕಾರು, ರಾಮಕುಂಜ, ಕೊಯಿಲ, ಗೋಳಿತೊಟ್ಟು, ನೆಲ್ಯಾಡಿ ಸೇರಿದಂತೆ 16 ಗ್ರಾಮಗಳಿಗೆ ನೀರು ಪೂರೈಕೆಗೆ ಸರ್ಕಾರದಿಂದ 207 ಕೋಟಿ ರೂ.ಮಂಜೂರುಗೊಂಡಿರುವುದಾಗಿ ತಿಳಿಸಿದರು.

ಯೋಜನೆಯ ನೀಲಿನಕ್ಷೆಯ ಪ್ರಕಾರ ಬಜತ್ತೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಉಪ್ಪಿನಂಗಡಿ ಗ್ರಾಮದ ಮಠ, ಹಿರೇಬಂಡಾಡಿ ಗ್ರಾಮದಿಂದ ರಾಮನಗರ ಲಕ್ಷ್ಮೀನಗರಕ್ಕೆ ಶುದ್ಧ ನೀರು ಒದಗಿಸಲಾಗುವುದು ಎಂದರು.

ಪಂಚಾಯಿತಿ ಸದಸ್ಯ ಯು.ಟಿ.ಮಹಮ್ಮದ್ ತೌಸಿಪ್ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯಲ್ಲಿ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ವ್ಯಾಪಕ ದೂರುಗಳು ಕೇಳಿ ಬಂದಿವೆ. ನೂತನವಾಗಿ ರಚಿಸಿದ ಟ್ಯಾಂಕ್‌ಗಳ ಸೋರಿಕೆ, ಭೂಮಿ ಮೇಲ್ಭಾಗದಲ್ಲೆ ಪೈಪ್ ಅಳವಡಿಸಿರುವುದು, ನೀರು ಬಾರದಿದ್ದರೂ ಮೀಟರ್ ತಿರುಗುವುದು ಮೊದಲಾದ ದೂರು ಕೇಳಿ ಬರುತ್ತಿದೆ. ಈ ಮಧ್ಯೆ ಈ ಹೊಸ ಯೋಜನೆ ಇಲ್ಲಿ ತಂದು ಮತ್ತೆ ಸಮಸ್ಯೆಯನ್ನು ಮೂಡಿಸದಿರಿ. ಈ ಯೋಜನೆ ನೀರು ಇಲ್ಲದ ಬರವುಳ್ಳ ಪ್ರದೇಶಗಳಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಲಿ ಎಂದರು.

ಗ್ರಾ.ಪಂ. ಸದಸ್ಯ ಅಬ್ದುಲ್ ರಶೀದ್ ಬಹುಗ್ರಾಮ ಯೋಜನೆ ಅನುಷ್ಠಾನಗೊಳಿಸುವ ಸಮಯದಲ್ಲಿ ಗುಣಮಟ್ಟದ ಖಾತ್ರಿ, ಐದು ವರ್ಷಗಳ ನಿರ್ವಹಣೆಯನ್ನು ಗುತ್ತಿಗೆದಾರರೇ ನಿಭಾಯಿಸಿದರೆ ಮಾತ್ರ ಯೋಜನೆ ಒದಗಿಸಿ. ಮನಸಿಗೆ ಬಂದಂತೆ ಕಾಮಗಾರಿ ಮಾಡಿ ಕಣ್ಮರೆಯಾಗುವುದಾದರೆ ಕಾಟಾಚಾರದ ಕಾಮಗಾರಿ ನಮ್ಮ ಗ್ರಾಮಕ್ಕೆ ಅಗತ್ಯವಿಲ್ಲವೆಂದರು.

ಉಪಾಧ್ಯಕ್ಷರಾದ ವಿದ್ಯಾಲಕ್ಷ್ಮೀ ಪ್ರಭು ಯೋಜನೆ ಕುರಿತು ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಿತ ಪಿ.ಡಿ.ಒ ಅವರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ತಿಳಿಸುವುದಾಗಿ ಹೇಳಿದರು. ನೀರು ನೈರ್ಮಲ್ಯ ಸಮಿತಿಯ ಸಿದ್ದಿಕ್ ಕೆಂಪಿ ಬಿಲ್ಲು ಕಲೆಕ್ಟರ್ ಇಸಾಕ್, ಉಮೇಶ ಮತ್ತಿತರರು ಕಾರ‌್ಯದರ್ಶಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net