

ಗದಗ: ಅವಳಿ ನಗರದಲ್ಲಿ ಉಷ್ಣಾಂಶ ಅಧಿಕಗೊಳ್ಳುತ್ತಿದ್ದು, ನೀರಿನ ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.
ನಗರದ ಹಲವು ಬಡಾವಣೆಗಳಲ್ಲಿ 6ರಿಂದ 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸಾರ್ವಜನಿಕ ನಳಗಳ ಮುಂದೆ ಖಾಲಿ ಕೊಡಗಳ ಸಾಲು ಕಾಣಸಿಗುತ್ತದೆ. ಸರತಿಯಲ್ಲಿ ನಿಂತು ನೀರು ತುಂಬಿಸಿಕೊಳ್ಳಲು ಮಹಿಳೆಯರು ಕಷ್ಟಪಡುತ್ತಿದ್ದಾರೆ. ಚುನಾವಣೆ ಕಾರಣ ನೀರಿನ ಬರದ ಕಾವು ಬೆಳಕಿಗೆ ಬಂದಿರಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಜನರು ನೀರಿನ ಸಮಸ್ಯೆ ಹೇಳತೊಡಗಿದ್ದಾರೆ. ಪ್ರತಿಭಟನೆ, ರಸ್ತೆತಡೆ ಸಾಮಾನ್ಯವಾಗಿವೆ. ಅವಳಿ ನಗರಕ್ಕೆ ನೀರು ಪೂರೈಸುವ ಕೊರ್ಲಹಳ್ಳಿ ಬಳಿ ಪೈಪ್‌ಲೈನ್ ಪದೇಪದೆ ಒಡೆದು ಸೋರಿಕೆ ಆಗುತ್ತಿರುವುದರಿಂದ ವ್ಯತ್ಯಯ ಕಂಡುಬರುತ್ತಿದೆ. ಜನರು ಖಾಸಗಿ ಟ್ಯಾಂಕರ್‌ಗಳ ಮೋರೆ ಹೋಗಿದ್ದಾರೆ. ವಾರ್ಡ್‌ಗಳಲ್ಲಿ ನಗರಸಭೆಯಿಂದಲೇ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವ ವಿಷಯ ತಿಳಿದು ಟ್ಯಾಂಕ್‌ಗಳ ಎದುರು ಜನರು ಸರತಿಯಲ್ಲಿ ಕೊಡಗಳನ್ನಿಡುತ್ತಿದ್ದಾರೆ. ಸೈಕಲ್ ಮತ್ತು ಕೈಗಾಡಿಗಳಲ್ಲಿ ಮಹಿಳೆಯರು ನೀರು ತೆಗೆದುಕೊಂಡು ಹೋಗುವ ದೃಶ್ಯಗಳೂ ನಗರದಲ್ಲಿ ಸಾಮಾನ್ಯವಾಗಿವೆ.
ಶುದ್ಧ ನೀರಿನ ಟಕ ಆಸರೆ: ಅವಳಿ ನಗರದಲ್ಲಿ 47ಕ್ಕೂ ಅಧಿಕ ಶುದ್ಧ ನೀರಿನ ಟಕಗಳಿವೆೆ. ಬಹುತೇಕ ವಾರ್ಡ್‌ಗಳಲ್ಲಿ ಒಂದು ಅಥವಾ ಎರಡು ಶುದ್ಧ ನೀರಿನ ಟಕ ಇರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ನಿತ್ಯ ಬಳಕೆ ನೀರಿಗೆ ಕೊಳವೆಬಾವಿ ಆಶ್ರಯಿಸಿದ್ದಾರೆ. ಅವಳಿ ನಗರದ ಜನತೆ ನೀರಿನ ಸಮಸ್ಯೆ ಯಾವಾಗ ಬಗೆಹರಿಯಲಿದೆ ಎಂದು ಜನತೆ ಕಾಯುತ್ತಿದ್ದಾರೆ.
ನಾಲ್ಕು ಕೆರೆ ತುಂಬಿದರೆ ನೀಗಲಿದೆ ದಾಹ
ಗಜೇಂದ್ರಗಡ: ತಾಲೂಕಿನ ಪಟ್ಟಣ ಪ್ರದೇಶಗಳಾದ ಗಜೇಂದ್ರಗಡ, ನರೇಗಲ್ನಲ್ಲಿ 15-20 ದಿನಗಳಿಗೊಮ್ಮೆ ನೀರು ಬರುತ್ತಿತ್ತು. ಆದರೆ, ಜಿಗಳೂರು ಕೆರೆ ಉದ್ಘಾಟನೆಗೊಂಡ ನಂತರ ಮಲಪ್ರಭೆ ನೀರು 4 ದಿನಕ್ಕೊಮ್ಮೆ ಬರುತ್ತಿದ್ದು, ನೀರಿನ ಬವಣೆ ನೀಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ ಮಿಷನ್ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ತಾಲೂಕಿನ ಲಕ್ಕಲಕಟ್ಟಿ, ಹೊಸರಾಂಪುರ, ರಾಜೂರು, ಜಿಗೇರಿ, ವದೇಗೊಳ ಸೇರಿ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ.
ಲಭ್ಯತೆಯಿದ್ದರೂ ಅಸಮರ್ಪಕ ನಿರ್ವಹಣೆ
ಮುಂಡರಗಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭದಿಂದಾಗಿ (ಡಿಬಿಒಟಿ ಯೋಜನೆ) ತಾಲೂಕಿನ ಬಹುತೇಕ ಕಡೆಗಳಲ್ಲಿ ತುಂಗಭದ್ರಾ ನದಿ ದೊರೆಯುತ್ತಿದೆ. ಕೆಲವು ಕಡೆ ಮಾತ್ರ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ತಾಲೂಕಿನ ಸಿಂಗಟಾಲೂರ ಬ್ಯಾರೇಜ್ ಹಿನ್ನೀರಿನ (ಕುಡಿಯುವ ನೀರಿಗಾಗಿ ಮೀಸಲಿಟ್ಟ ನೀರು) ಮೂಲಕ ಗುಮ್ಮಗೋಳ ಬಳಿಯ ತುಂಗಭದ್ರಾ ನದಿ ದಡದಲ್ಲಿ ನಿರ್ಮಿಸಿರುವ ಪಂಪ್‌ಹೌಸ್ ಘಟಕದಿಂದ ಜಾಲವಾಡಗಿ ಸಮೀಪದ ನದಿ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಲಾಗುತ್ತದೆ. ಅಲ್ಲಿಂದ ಪಟ್ಟಣ ಸೇರಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಇದರಿಂದ ಬಹುತೇಕ ಕಡೆಗಳಲ್ಲಿ ತುಂಗಭದ್ರಾ ನದಿ ನೀರು ಸಿಗುವಂತಾಗಿದೆ.
ದಾರಿಯಲ್ಲೇ ಸೋರಿಕೆಯಾಗುವ ತುಂಗಭದ್ರಾ ನೀರು
ಲಕ್ಷ್ಮೇಶ್ವರ: ಪಟ್ಟಣಕ್ಕೆ 40 ಕಿ.ಮೀ ದೂರದ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತದೆ. 20 ವರ್ಷಗಳ ಹಿಂದೆ ಅಳವಡಿಸಿದ ಪೈಪ್‌ಲೈನ್ ತುಕ್ಕು ಹಿಡಿದಿದೆ. ನದಿಯಿಂದ ಪಟ್ಟಣಕ್ಕೆ ನೀರು ಬಂದು ತಲುಪುವಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಪೋಲಾಗುತ್ತಿದೆ. ಪಂಪ್‌ಹೌಸ್, ಶುದ್ಧೀಕರಣ ಘಟಕ ಸಂಪೂರ್ಣ ಹಾಳಾಗಿದೆ. ಈ ಮೊದಲು 8 ದಿನಗಳಿಗೊಮ್ಮೆ ಬರುತ್ತಿದ್ದ ನೀರು ಸದ್ಯ 12ರಿಂದ 15 ದಿನಗಳಿಗೊಮ್ಮೆ ಬರುತ್ತದೆ. ಅದೂ ಪಟ್ಟಣದ ಅರ್ಧಭಾಗಕ್ಕೆ ಮಾತ್ರ. ಪಟ್ಟಣದ ಬಹುತೇಕ ವಾರ್ಡ್‌ಗಳ ಜನರಿಗೆ ಬೋರ್‌ವೆಲ್‌ನ ಸವಳು ನೀರೇ ಗತಿಯಾಗಿದೆ.
ಪ್ರಾಯೋಗಿಕ ಯೋಜನೆಯೇ ಅತಂತ್ರ
ನರಗುಂದ: 2019ರಲ್ಲಿ ನರಗುಂದ ಪಟ್ಟಣ ಸೇರಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ನಿರಂತರ ಕುಡಿಯುವ ನೀರಿನ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಅವೈಜ್ಞಾನಿಕ ಪೈಪ್‌ಲೈನ್‌ನಿಂದಾಗಿ ನೀರಿಗಾಗಿ ವಾರಗಟ್ಟಲೇ ಕಾಯುವ ಪರಿಸ್ಥಿತಿ ತಲೆದೂರಿದೆ. 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನರಗುಂದ ಪಟ್ಟಣಕ್ಕೆ ರೇಣುಕಾಸಾಗರ ಜಲಾಶಯದಿಂದ ನಿರಂತರ ಕುಡಿಯುವ ನೀರು ಪೂರೈಸುವ 63 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ, ಗದಗ ಜಿಲ್ಲೆಯ ಎಲ್ಲ ಜನವಸತಿ ಪ್ರದೇಶಗಳಿಗೆ ಮಲಪ್ರಭಾ ಮತ್ತು ತುಂಗಭದ್ರಾ ನದಿ ಮೂಲಗಳಿಂದ ನೀರು ಪೂರೈಸುವ 1,050 ಕೋಟಿ ರೂಪಾಯಿ ವೆಚ್ಚದ ಪ್ರಾಯೋಗಿಕ ಯೋಜನೆಗೆ ಸಿದ್ದರಾಮಯ್ಯ 2015-16 ರಲ್ಲಿ ಚಾಲನೆ ನೀಡಿದ್ದರು. ಆದರೆ, ಯೋಜನೆಯ ಅವಧಿ ಮುಗಿದು ಆರೇಳು ವರ್ಷ ಗತಿಸಿದರೂ ನಿರಂತರ ಶುದ್ಧ ಕುಡಿಯುವ ನೀರು ಇನ್ನೂ ಪೂರೈಕೆ ಆಗುತ್ತಿಲ್ಲ. 7,234 ಮನೆಗಳ ಪೈಕಿ ಬಹುತೇಕ ಮನೆಗಳಿಗೆ ಇನ್ನೂ ಮೀಟರ್ ಅಳವಡಿಸಿಲ್ಲ.
ಕುಡಿಯುವ ಮತ್ತು ಬಳಕೆ ನೀರಿಗಾಗಿ ಒಂದು ತಿಂಗಳಿನಿಂದ ಸಮಸ್ಯೆ ಹೆಚ್ಚಾಗುತ್ತಿದೆ. ನಗರಸಭೆ ಸದಸ್ಯರು ಚುನಾವಣೆಯಲ್ಲಿ ಮಗ್ನರಾಗಿದ್ದರು. ಸಮರ್ಪಕವಾಗಿ ನೀರು ಪೂರೈಸಲು ವಿಲರಾದರು. ನೀರಿನ ಟ್ಯಾಂಕರ್‌ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಜಿಲ್ಲಾಡಳಿತ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಲಿ.-ಗದಗ ನಿವಾಸಿ ತುಂಗಭದ್ರಾ ನದಿಯಿಂದ ಲಕ್ಷ್ಮೇಶ್ವರಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಾಗಿ ಸರ್ವೇ ಕೈಗೊಂಡು, ಡಿಪಿಆರ್ ಸಿದ್ಧಪಡಿಸಿ ಅನುದಾನ ಮಂಜೂರಾತಿಗೆ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಕ್ಷೇತ್ರದ ನೂತನ ಶಾಸಕರ ಗಮನಕ್ಕೂ ತರಲಾಗುವುದು.-ರವೀಂದ್ರ ಜೋಶಿ, ಕೆಯುಡಬ್ಲುೃಎಸ್ ಎಇಇ ಗದಗ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಮುಂಡರಗಿ ಪಟ್ಟಣ ಸೇರಿ ತಾಲೂಕಿನ ಎಲ್ಲ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೆಲವು ಕಡೆ ಮಾತ್ರ ಶುದ್ಧ ನೀರಿನ ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿಂದ ಬಂದಿದ್ದು, ದುರಸ್ತಿಗೆ ಕ್ರಮ ವಹಿಸಲಾಗುವುದು.-ದತ್ತಾತ್ರೇಯ ಮೇದಾ, ಎಇಇ, ಗ್ರಾಮೀಣ ಕುಡಿಯುವ ನೀರು ಸರಬುರಾಜು ಉಪವಿಭಾಗ, ಮುಂಡರಗಿ