ಕಾಮಗಾರಿ ವಿಳಂಬಕ್ಕೆ ಮಳೆ ನೆಪ ಸಲ್ಲ: ಡಾ.ಆನಂದ್ ಸೂಚನೆ

New Project
ದಕ್ಷಿಣ ಕನ್ನಡ ಜಿಪಂ ಸಭಾಂಗಣದಲ್ಲಿ ಗುರುವಾರ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಪರಿಶೀಲನಾ ಸಭೆ ನಡೆಯಿತು.
Published on

ಮಂಗಳೂರು: ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್ ಕಾಮಗಾರಿ ವಿಳಂಬಕ್ಕೆ ಮಳೆಗಾಲ ಕಾರಣ ನೀಡಲು ಸಾಧ್ಯವಿಲ್ಲ. ಮಳೆಗಾಲ ನಿರೀಕ್ಷಿತವಾಗಿದ್ದು, ಇದನ್ನು ಪರಿಗಣಿಸಿಯೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಕುರಿತು ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲೆಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

36 ಕಾಮಗಾರಿಗಳು ವಿವಿಧ ಕಾರಣಗಳಿಂದ ನಿಗದಿತ ಅವಧಿಗಿಂತ ವಿಳಂಬವಾಗಿವೆ. ಟೆಂಡರ್ ಷರತ್ತಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಾದ ಎಲ್ಲ ತಾಂತ್ರಿಕ, ಹವಾಮಾನ ಸಹಿತ ಎಲ್ಲ ಅಂಶಗಳನ್ನು ಪರಿಗಣಿಸಿ ಕಾಲಾವಕಾಶ ನೀಡಲಾಗಿರುತ್ತದೆ. ಆದ್ದರಿಂದ ಕಾಮಗಾರಿ ವಿಳಂಬಕ್ಕೆ ಸಬೂಬು ಹೇಳುವಂತಿಲ್ಲ ಎಂದು ಅವರು ಇಂಜಿನಿಯರ್‌ಗಳಿಗೆ ತಿಳಿಸಿದರು.

ವಿಳಂಬವಾದ ಕಾಮಗಾರಿಗಳ ವಿವರ ದಾಖಲಿಸುವ ಸಂದರ್ಭ ಪ್ರತೀ ಕಾಮಗಾರಿಯನ್ನು ಪ್ರತ್ಯೇಕಿಸಿ ಕಾರಣವನ್ನು ಉಲ್ಲೇಖಿಸಬೇಕು ಎಂದು ಅವರು ಹೇಳಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗೋಬರ್ ಧನ್ ಯೋಜನೆಯಡಿ ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ಎರಡು ಘಟಕಗಳು ನಿರ್ಮಾಣವಾಗಿದ್ದು, ಪುತ್ತೂರಿನ ಬಡಗನ್ನೂರು ಗ್ರಾಪಂನಲ್ಲಿ ನಿರ್ಮಿಸಲುದ್ದೇಶಿಸಿರುವ ಗೋಬರ್‌ಧನ ಅನುಷ್ಠಾನಕ್ಕೆ 11.93 ಲಕ್ಷ ರೂ. ಡಿಪಿಆರ್ (ಸಮಗ್ರ ಯೋಜನೆ ವರದಿ) ಮತ್ತು ಅಂದಾಜುಪಟ್ಟಿ ತಯಾರಿಸಲಾಗಿದ್ದು, ಅನುಮೋದನೆ ನೀಡಬೇಕಾಗಿದೆ ಎಂದು ಯೋಜನೆಯ ಅಧಿಕಾರಿ ನವೀನ್ ಸಭೆಯಲ್ಲಿ ಮಾಹಿತಿ ನೀಡಿದರು.

43 ಸಾವಿರ ಮನೆಗಳಿಗೆ ಬಾಕಿ

ಜಲಜೀವನ ಮಿಷನ್ ಯೋಜನೆಯಡಿ ಜಿ.ಪಂ.ವ್ಯಾಪ್ತಿಯ 3,34,185 ಮನೆಗಳಿಗೆ ನೀರಿನ ಸಂಪರ್ಕ ಒದಗಿಸಬೇಕಾಗಿದೆ. ಇದರಲ್ಲಿ ಈಗಾಗಲೇ 2,90583 ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಉಳಿದ 43,602 ಮನೆಗಳಿಗೆ ನೀರು ಸಂಪರ್ಕ ವಿವಿಧ ಹಂತಗಳಲ್ಲಿ ಬಾಕಿ ಇದೆ.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿದೇಶಕ ಕೆಂಪೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net