

ಕುಶಾಲನಗರ:
ಕೊಡಗಿನ ವಾಣಿಜ್ಯ ನಗರಿ ಹೆಗ್ಗಳಿಕೆಯ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಇನ್ನು 2 ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರ ಆಗುವ ನಿರೀಕ್ಷೆ ಇದೆ. ಅಮೃತ್-02 ಯೋಜನೆ ಅಡಿಯಲ್ಲಿ ಈಗಾಗಲೇ ಈ ಸಂಬAಧ ಕಾಮಗಾರಿ ಆರಂಭವಾಗಿದ್ದು, ಕುಶಾಲನಗರದ ಜತೆಯಲ್ಲಿ ಪಿರಿಯಾಪಟ್ಟಣಕ್ಕೂ ಕಾವೇರಿ ನದಿಯಿಂದ ನೀರು ಸರಬರಾಜು ಆಗಲಿದೆ. ಭವಿಷ್ಯದ ಜನಸಂಖ್ಯೆ ಏರಿಕೆ ಪ್ರಮಾಣ ದೃಷ್ಟಿಯಲ್ಲಿಟ್ಟುಕೊಂಡು ಈ ಸರ್ವಋತು ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ತಾಲೂಕು ಕೇಂದ್ರ ಕುಶಾಲನಗರವೂ ಒಂದು. ಜೀವನದಿ ಕಾವೇರಿ ಇಲ್ಲಿ ಮೂರು ಕಡೆಯಿಂದ ಸುತ್ತುವರಿದು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ ಎಂಬAತಾಗಿದೆ. ಕಳೆದ ವರ್ಷವಂತೂ ಇಲ್ಲಿಯ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿತ್ತು. ನದಿಯಲ್ಲಿ ನೀರಿನ ಹರಿವು ಸ್ಥಗಿತವಾಗಿದ್ದಲ್ಲದೆ, ನೀರು ಪೂರೈಕೆಯ ಪಂಪ್‌ಗಳು ಸುಮಾರು 3 ತಿಂಗಳು ಸಂಪೂರ್ಣ ಬಂದ್ ಆಗಿದ್ದವು. ಬೋರ್‌ವೆಲ್‌ಗಳೂ ಬತ್ತಿಹೋಗಿ ಟ್ಯಾಂಕರ್‌ಗಳ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹಾಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎನ್ನುವ ಕೂಗು ಕಳೆದ 3 ದಶಕಗಳ ಹಿಂದಿನಿAದಲೇ ಕೇಳಿಬಂದಿತ್ತು.
ಹಿಂದೊಮ್ಮೆ ಹಾರಂಗಿ ಜಲಾಶಯದಿಂದ ಕುಶಾಲನಗರಕ್ಕೆ ಕುಡಿಯುವ ನೀರು ಪೂರೈಕೆ ಬಗ್ಗೆ ಚರ್ಚೆ ಆಗಿತ್ತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಈ ಸಂಬAಧ ಯೋಜನಾ ವರದಿಯೊಂದನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಇನ್ನೇನು ಈ ಯೋಜನೆ ಕಾರ್ಯಗತ ಆಗಲಿದೆ ಎನ್ನುವಷ್ಟರಲ್ಲಿ ಅಮೃತ್-02 ಯೋಜನೆ ಅಡಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಕುಶಾಲನಗರಕ್ಕೆ ಮಂಜೂರಾಗಿದ್ದು, ಕೂಡಿಗೆ ಸಂಗಮ ಬಳಿ ಹಾರಂಗಿ ಮತ್ತು ಕಾವೇರಿ ನದಿ ಸಂಗಮ ಸ್ಥಳದ ಹತ್ತಿರ ಜಾಕ್‌ವೆಲ್ ನಿರ್ಮಾಣ ಕಾಮಗಾರಿ ಶುರುವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ಬರುತ್ತಿರುವ ಯೋಜನೆ ಇದಾಗಿದ್ದು, ವರ್ಷದ 365 ದಿನಗಳ ಕಾಲವೂ ಯಾವುದೇ ಅಡೆ ತಡೆ ಇಲ್ಲದಂತೆ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಇಲ್ಲಿಂದ ನೀರು ಪೂರೈಕೆಯ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆದರೆ ಹಾರಂಗಿ ಜಲಾಶಯದ ನೀರು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾದ ಜಾಣ್ಮೆ ಈ ಯೋಜನೆ ಹಿಂದೆ ಅಡಗಿದೆ.
ಕುಶಾಲನಗರ ಮಾತ್ರವಲ್ಲದೆ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣಕ್ಕೂ ಇದೇ ಸ್ಥಳದಿಂದ ಕುಡಿಯುವ ನೀರು ಸರಬರಾಜು ಆಗಲಿದೆ. ಕುಶಾಲನಗರಕ್ಕೆ ನೀರು ಪೂರೈಕೆ ಮಾಡಲು ಸುಮಾರು 40 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಪಿರಿಯಾಪಟ್ಟಣಕ್ಕೆ 64 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಎರಡೂ ಪಟ್ಟಣಗಳಿಗೆ ನೀರು ಪೂರೈಸುವ ಸಂಬAಧ ಇದೀಗ ಕೂಡಿಗೆ ಬಳಿ ಜಾಕ್‌ವೆಲ್ ಕಾಮಗಾರಿ ನಡೆಯುತ್ತಿದೆ. 12 ಮೀ. ಸುತ್ತಳತೆ ಮತ್ತು ಇಷ್ಟೇ ಈ ಆಳದ ಜಾಕ್‌ವೆಲ್‌ನಿಂದ 150 ಅಶ್ವ ಶಕ್ತಿ ಮೋಟರ್ ಸಾಮರ್ಥ್ಯದ ಪಂಪ್‌ಗಳ ಮೂಲಕ ನೀರು ಎತ್ತಲಾಗುವುದು.
ಕುಶಾಲನಗರದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಈಗಾಗಲೇ 11.06 ದಶಲಕ್ಷ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶುದ್ಧೀಕರಣ ಘಟಕವೂ ನಿರ್ಮಾಣವಾಗಲಿದೆ. ಹಾಲಿ ಇಲ್ಲಿ ಇರುವ ಹಳೆಯ ಟ್ಯಾಂಕ್‌ಗಳು ಮತ್ತು ಶುದ್ಧೀಕರಣ ಘಟಕವನ್ನು ಬಳಸಿಕೊಂಡು ಕೂಡಿಗೆಯಿಂದ ಪೈಪ್‌ಗಳ ಮೂಲಕ ಬರುವ ನೀರನ್ನು ಪುರಸಭೆ ವ್ಯಾಪ್ತಿಯಲ್ಲಿ ವಿತರಿಸಲಾಗುವುದು.
ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಈ ಹಿಂದೆ ಕೊಪ್ಪ ಸೇತುವೆ ಹತ್ತಿರ ನಿರ್ಮಾಣ ಮಾಡಲಾದ ಯೋಜನೆಯನ್ನು ಉಳಿಸಿಕೊಂಡು ಕುಂದನಳ್ಳಿ ವೃತ್ತದ 10 ದಶಲಕ್ಷ ಲೀ. ಲಕ್ಷ ಲೀಟರ್ ಸಾಮರ್ಥ್ಯದ ಮತ್ತೊಂದು ಬೃಹತ್ ಟ್ಯಾಂಕ್‌ನಲ್ಲಿ ಕೂಡಿಗೆ ಸಂಗಮದಿAದ ಹರಿಸಲಾದ ನೀರನ್ನು ಸಂಗ್ರಹ ಮಾಡಲಾಗುತ್ತದೆ. ನಂತರ ಶುದ್ಧೀಕರಿಸಿ ಪೂರೈಸಲಾಗುತ್ತದೆ. ಜಾಕ್‌ವೆಲ್ ಮತ್ತು ಟ್ಯಾಂಕ್‌ಗಳ ನಿರ್ಮಣ ಕಾಮಗಾರಿ ಎರಡು ಕಡೆಗಳಲ್ಲೂ ಭರದಿಂದ ನಡೆದಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಯೋಜನೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಈ ಯೋಜನೆ ಪೂರ್ಣಗೊಂಡ ನಂತರ ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಬರುವ ಸುಮಾರು 30 ಸಾವಿರದಷ್ಟು ಜನಸಂಖ್ಯೆಗೆ ಅನುಕೂಲ ಆಗಲಿದೆ. ವರ್ಷದ 365 ದಿನಗಳೂ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮುಂದಿನ 50 ವರ್ಷಗಳ ನಗರದ ಬೆಳವಣಿಗೆ ಗಮನದಲ್ಲಿ ಇರಿಸಿಕೊಂಡು ಯೋಜನೆ ರೂಪಿಸಿರುವುದರಿಂದ ಮುಂದಿನ ಕೆಲವು ದಶಕಗಳ ತನಕ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿಕ್ಕಿಲ್ಲ ಎನ್ನುವ ಆಶಾಭಾವನೆ ಇಟ್ಟುಕೊಳ್ಳಲಾಗಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಗೆ ಮತ್ತು ಪಿರಿಯಾಪಟ್ಟಣ ನಗರಕ್ಕೆ ಇಲ್ಲಿಂದ ನೀರು ಪೂರೈಕೆ ಮಾಡಲಾಗುತ್ತದೆ. 12 ಮೀ. ಎತ್ತರ ಮತ್ತು ಆಳದ ಜಾಯಿಂಟ್ ಜಾಕ್‌ವೆಲ್ ನಿರ್ಮಿಸಿ 150 ಅಶ್ವ ಶಕ್ತಿ ಮೋಟಾರ್ ಪಂಪ್ ಮೂಲಕ ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಪ್ರದೇಶದಿಂದ ಟ್ಯಾಂಕ್ ಮತ್ತು ಶುದ್ಧೀಕರಣ ಘಟಕಗಳಿಗೆ ನೀರು ಹಾಯಿಸಲಾಗುವುದು. ಈ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ಕುಶಾಲನಗರ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಇದು ಈ ಭಾಗದ ಜನರ ಬಹುನಿರೀಕ್ಷೆಯ ಯೋಜನೆ ಆಗಿದೆ. ಈ ಯೋಜನೆ ಪೂರ್ಣವಾದಾಗ ಕುಶಾಲನಗರ ಜನತೆಗೆ ವರ್ಷದ 365 ದಿನಗಳೂ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತದೆ. ಕೂಡಿಗೆ ಸಮೀಪದ ಸಂಗಮದಲ್ಲಿ ಆಳದ ನೀರು ಸಂಗ್ರಹವಾಗುತ್ತಿರುತ್ತದೆ. ಒಂದೊಮ್ಮೆ.. ಅಲ್ಲಿ ನೀರಿನ ಕೊರತೆ ಉಂಟಾದರೂ ಹಾರಂಗಿ ಜಲಾಶಯದಿಂದ ಅಲ್ಲಿಗೆ ನೀರನ್ನು ಹರಿಸಿಕೊಳ್ಳಬಹುದು.
ವಿ.ಪಿ. ಶಶಿಧರ್, ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ , ಕುಶಾಲನಗರ ತಾಲೂಕು