

ಚಿತ್ರದುರ್ಗ: ಸ್ವಚ್ಛತೆ, ವೈಯಕ್ತಿಕ ಶುಚಿತ್ವ ಕುರಿತ ವಿಶೇಷ ಆಂದೋಲನ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ಶನಿವಾರ ಏಕಕಾಲಕ್ಕೆ ನಡೆಯಿತು.
ನಾನು ಬದಲಾದರೆ ಜಗತ್ತು ಬದಲಾದಂತೆ, ಬದಲಾವಣೆ ನಮ್ಮಿಂದಲೇ ಆಗಲಿ ಎಂಬ ಘೋಷವಾಕ್ಯದೊಂದಿಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲಾಯಿತು. ಗ್ರಾಮಗಳಲ್ಲಿ ಕಸ ಸಂಗ್ರಹಿಸುವ ಸ್ವಚ್ಛ ವಾಹಿನಿ ಮೂಲಕ ಸ್ವಚ್ಛತೆಯ ಮಹತ್ವನ್ನು ಬಿತ್ತರಿಸಲಾಯಿತು.
ಚುನಾಯಿತ ಪ್ರತಿನಿಧಿಗಳು, ಗ್ರಾಪಂ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ‌್ಯಕರ್ತೆಯರು, ಶಿಕ್ಷಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಮನೆ ಸುತ್ತಲಿನ ಪರಿಸರ ಸ್ವಚ್ಛವಿರಬೇಕು. ಕೊಳವೆಬಾವಿ, ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತಂದರೂ ತಪ್ಪದೆ ಕಾಯಿಸಿ ಆರಿಸಿ ಕುಡಿಯುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಲಹೆ ನೀಡಿದರು.
ಜಾನಕೊಂಡದಲ್ಲಿ ಏರ್ಪಡಿಸಿದ್ದ ಜಾಥಾದಲ್ಲಿ ತಾ.ಪಂ.ಇಒ ಹನುಮಂತಪ್ಪ, ಜಿಪಂ ಸಹಾಯಕ ಯೋಜನಾ ಅಧಿಕಾರಿ ಸುಮಾ, ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ರಂಗಮ್ಮ, ಪಿಡಿಒ ಮಂಜುನಾಥ ಇದ್ದರು.