

ಮುಳುಬಾಗಿಲು: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಮಜ್ಜಿಗೆ, ಎಳನೀರು, ಹಾಲು ಮುಂತಾದ ತಂಪು ಪಾನಿಯಗಳನ್ನು ಸೇವಿಸಬೇಕು. ಮಕ್ಕಳು ಹತ್ತಿ ಬಟ್ಟೆಗಳನ್ನು ಧರಿಸಬೇಕು, ಮಾಂಸಾಹಾರ, ಅತಿ ಹೆಚ್ಚು ಎಣ್ಣೆ ಬಳಕೆ ಆಹಾರ ತ್ಯಜಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸುಗಣ ತಿಳಿಸಿದರು.
ತಾಲೂಕಿನ ಹೆಬ್ಬಣಿ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿ, ಆಸ್ಪತ್ರೆ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಅವರಿಗೆ ಚಿಕಿತ್ಸೆ ಕೊಡುವ ಮೂಲಕ ಬೇಸಿಗೆಕಾಲದಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿಯಮಗಳನ್ನು ತಿಳಿಸಿಕೊಡಬೇಕು. ಬಿಸಿಲಿನ ತಾಪ ಹೆಚ್ಚುವುದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನಹರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿದರು.
ಮಧ್ಯಪಾನ, ಧೂಮಪಾನ, ಕಾಫಿ, ಟೀ ಹಾಗೂ ಕಾಬೋರ್ನೈಟೆಡ್ ಪಾನೀಯಗಳನ್ನು ಸೇವಿಸುವುದು ನಿಲ್ಲಿಸಬೇಕು. ಸಾಧ್ಯವಾದಷ್ಟು ತಂಪಾದ ಪಾನೀಯಗಳನ್ನು ಸೇವಿಸಬೇಕು. ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಬೇಕು, ಬಿಸಿಲಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು, ವೈದ್ಯರು, ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಂಚಬೇಕು ಎಂದು ಮಾಹಿತಿ ನೀಡಿದರು.
ಈಗಾಗಲೇ ತಾಲೂಕಿನಲ್ಲಿ ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿ ಅಂಥವರ ವಿರುದ್ಧ ಪ್ರಕರಣ ದಾಖಲಾತಿಯಾಗಿದ್ದು, ಮುಂದಿನ ದಿನಗಳಲ್ಲಿ ಯಾರಾದರೂ ನಕಲಿ ಕ್ಲಿನಿಕ್ ತೆರೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ಎಚ್ಚರಿಸಿ, ಬೇರೆ ಕಡೆಯಿಂದ ನಕಲಿ ವೈದ್ಯರು ಬಂದು ಚಿಕಿತ್ಸೆ ನೀಡುತ್ತಿದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಹೆಬ್ಬಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಾಯನ್, ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ರಾಜು, ಚಿದಾನಂದ ಅರುಣ, ರೋಜಾ, ಜಯಶ್ರೀ, ಶೋಭಾ, ಇದ್ದರು.