ಮನೆಗೆ ನುಗ್ಗಿದ ಚರಂಡಿ ನೀರು

DRAINAGE
Published on

ಉಡುಪಿ: ಶಿರಿಬೀಡು ವಾರ್ಡ್‌ನ ಹೋಟೆಲ್ ಶಾಂಭವಿ ಸಮೀಪದ ನಾಲ್ಕು ಮನೆಗಳಿಗೆ ಗುರುವಾರ ಬೆಳಗ್ಗೆ ಚರಂಡಿ ನೀರು ನುಗ್ಗಿದೆ. ನಗರಸಭಾ ಸ್ವಚ್ಛತಾ ಸಿಬ್ಬಂದಿ ದುರಸ್ತಿಪಡಿಸಿದ ಬಳಿಕ ಮನೆ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶಿರಿಬೀಡು ವಾರ್ಡ್ ತಗ್ಗು ಪ್ರದೇಶವಾಗಿದ್ದು, ಒಂಬತ್ತು ವರ್ಷಗಳಿಂದ ಇಲ್ಲಿ ಒಳಚರಂಡಿ ಸಮಸ್ಯೆಯಿಂದಾಗಿ ವಾರದಲ್ಲಿ ಎರಡು ಸಲ ಹೀಗೆ ಕೊಳಚೆ ನೀರು ಮನೆ ಬಾಗಿಲಿಗೆ ಬರುತ್ತಿವೆ. ಸರ್ವೀಸ್ ಬಸ್ ನಿಲ್ದಾಣ ಸುತ್ತಮುತ್ತಲಿನ ಹೋಟೆಲ್‌ಗಳು, ಆಸ್ಪತ್ರೆಗಳು, ಬಹುಮಹಡಿ ಕಟ್ಟಡಗಳಿಂದ ಶೌಚಗೃಹದ ನೀರು ನೇರವಾಗಿ ಒಳಚರಂಡಿಗೆ ಸೇರುತ್ತಿದೆ. ಇದರಿಂದ ಶಿರಿಬೀಡುವಿನಿಂದ ಬನ್ನಂಜೆ ತನಕ ಚರಂಡಿ ಸದಾಕಾಲ ತುಂಬಿಕೊಂಡಿರುತ್ತದೆ. ಕೆಲವೊಮ್ಮೆ ಕಸಕಡ್ಡಿಗಳು ಸೇರಿ ನೀರಿನ ಸರಾಗ ಹರಿವಿಗೆ ತೊಂದರೆಯಾಗಿ ತ್ಯಾಜ್ಯ ನೀರು ರಸ್ತೆಯಲ್ಲೇ ನಿಲ್ಲುತ್ತದೆ ಎನ್ನುತ್ತಾರೆ ಸ್ಥಳೀಯರು. ವೆಟ್‌ವೆಲ್ ಕಾಮಗಾರಿಯ ಸಮಸ್ಯೆ: ನಗರದಲ್ಲಿ ಅನೇಕ ವರ್ಷದ ಹಿಂದೆ ಅಳವಡಿಸಿದ್ದ ಇಟ್ಟಿಗೆ ಚೇಂಬರ್‌ಗಳು ಸರಿಯಲ್ಲದೆ ಸಮಸ್ಯೆಯಾಗುತ್ತಿದ್ದು, ಒಂದು ಅಡಿ ಪೈಪ್‌ಗಳನ್ನು ಹಾಕಿ ಹೊಸ ಲೈನ್ ಕಾಮಗಾರಿ ನಡೆಯುತ್ತಿದೆ. ಆದರೆ ಕರಾವಳಿ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಶಾರದಾ ವೆಟ್‌ವೆಲ್ ಕಾಮಗಾರಿಯನ್ನು ನವಯುಗ ಸಂಸ್ಥೆ ಪೂರ್ಣಗೊಳಿಸದ ಕಾರಣ ಚರಂಡಿ ನೀರು ಸಮರ್ಪಕವಾಗಿ ನಿಟ್ಟೂರು ಎಸ್‌ಟಿಪಿ ಘಟಕಕ್ಕೆ ತಲುಪುತ್ತಿಲ್ಲ. ಇದರಿಂದ ಒಳಚರಂಡಿ ಸ್ವಲ್ಪ ಬ್ಲಾಕ್ ಆದರೂ ನೀರು ಉಕ್ಕಿ ಹರಿಯುತ್ತಿದೆ.

ಒಳಚರಂಡಿಯನ್ನು ಪ್ರತಿದಿನ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಒಂದು ಸಕ್ಕಿಂಗ್ ಯಂತ್ರ ಉಪಯೋಗಿಸುತ್ತಿದ್ದು, ಇನ್ನೊಂದು ವಾಹನ ಖರೀದಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಲಭಿಸಿದೆ. ಅನಂತರ ಹೆಚ್ಚಿನ ಸಮಸ್ಯೆ ನಿವಾರಣೆಯಾಗಲಿದೆ. | ಉದಯ ಶೆಟ್ಟಿ, ಉಡುಪಿ ನಗರಸಭೆ ಪೌರಾಯುಕ್ತ ಉಡುಪಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ವಾರಕ್ಕೆ 2-3 ಸಲ ಕೊಳಚೆ ನೀರು ಮನೆ ಕಾಂಪೌಂಡ್ ಒಳಗೆ ಬರುತ್ತದೆ. ಒಂಬತ್ತು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆ ಪರಿಹರಿಸಲು ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದೂರು ನೀಡಿದ ತಕ್ಷಣ ಪೌರಕಾರ್ಮಿಕರು ಬಂದು ಸರಿ ಮಾಡಿ ಹೋಗುತ್ತಾರೆ. ಆದರೆ ಶಾಶ್ವತ ಪರಿಹಾರ ಲಭಿಸುತ್ತಿಲ್ಲ. | ಅಕ್ಷಯ್ ಕುಮಾರ್ ಶೆಟ್ಟಿ, ಶಿರಿಬೀಡು ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net