ನಿಟ್ಟೂರಿಗೆ 'ಗಬ್ಬು ವಾಸನೆ' ಕೊಡುಗೆ

UDP-17-4-Nitturu
Published on

ನಿತ್ಯ ಪರದಾಡುತ್ತಿರುವ ವಾರ್ಡ್​ ಜನ | ಸ್ಪಂದಿಸುತ್ತಿಲ್ಲ ಅಧಿಕಾರಿಗಳ ಮನ

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲಾ ಕೇಂದ್ರವಾದ ಉಡುಪಿಯಲ್ಲೇ ವಾರ್ಡೊಂದರಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ವಾಸಿಸುತ್ತಿರುವ ಜನರು ಗಬ್ಬು ವಾಸನೆಯಿಂದ ದಿನವೂ ಹೈರಾಣಾಗುತ್ತಿದ್ದಾರೆ.

ನಗರಸಭೆ ವ್ಯಾಪ್ತಿಯ 8ನೇ ನಿಟ್ಟೂರು ವಾರ್ಡ್​ನಲ್ಲಿ ಒಳಚರಂಡಿ ಚೇಂಬರ್​ ಬ್ಲಾಕ್​ ಆಗಿದ್ದು, ಇನ್ನಿತರ ವಾರ್ಡ್​ಗಳಿಂದ ಬರುವ ಹೊಲಸು ನೀರು ಇಲ್ಲಿ ಹೊರಸೂಸುತ್ತಿದೆ. ಮಲಿನ ನೀರು ದುಗ್ಗಣಬೆಟ್ಟು ರಸ್ತೆಯಲ್ಲಿ ಹರಿಯುತ್ತಿದ್ದು, ಪರಿಸರ ಕಲುಷಿತಗೊಂಡಿದೆ.

ಜನರ ಪರದಾಟ

ನಿಟ್ಟೂರು ಪರಿಸರದಲ್ಲಿ ಹರಡಿರುವ ಗಬ್ಬು ವಾಸನೆಯಿಂದ ಸ್ಥಳೀಯರು ಪರದಾಡುವಂತಾಗಿದೆ. ವಾಸನೆಯಿಂದ ತಪ್ಪಿಸಿಕೊಳ್ಳಲು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಹಿರಿಯರು ಮಾಸ್ಕ್​ ಧರಿಸಿ ತಿರುಗಾಡುತ್ತಿದ್ದಾರೆ. ಅಲ್ಲಲ್ಲಿ ರಸ್ತೆಯಲ್ಲಿ ಚರಂಡಿಯ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಉತ್ಪತ್ತಿಸುವ ಕಾರ್ಖಾನೆಯಂತಾಗಿದೆ. ಪ್ರತಿ ಉಸಿರು ತೆಗೆದುಕೊಳ್ಳುವಾಗಲೂ ವಾಕರಿಕೆ ತರಿಸುವ ಅಸಹ್ಯ ವಾಸನೆಯಿಂದಾಗಿ ಸುತ್ತಮುತ್ತಲಿನ ಮನೆಗಳ ಜನರಿಗೆ ಆಹಾರ ಸೇವಿಸಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.

ನಾಗನ ಪೂಜೆಗೂ ತೊಡಕು

ನಿಟ್ಟೂರಿನ ಇದೇ ವಾರ್ಡ್​ನಲ್ಲಿ ಕಾರ್ಣಿಕದ ನಾಗಬನವೂ ಇದ್ದು, ಸ್ಥಳೀಯರಿಗೆ ಪೂಜೆ ಸಲ್ಲಿಸಲೂ ಆಗುತ್ತಿಲ್ಲ. ನಾಗಬನಕ್ಕೆ ಹೋಗುವ ದಾರಿಯಲ್ಲೂ ಒಳಚರಂಡಿ ನೀರು ಹರಿಯುತ್ತಿದ್ದು ಧಾರ್ಮಿಕ ಕಾರ್ಯಕ್ಕೂ ತೊಡಕಾಗುತ್ತಿದೆ. ನಿತ್ಯದ ಪೂಜೆಗೆ ತೆರಳಲು ಅರ್ಚಕರು ಹರಸಾಹಸ ಮಾಡುವಂತಾಗಿದೆ. ಶುದ್ಧವಾಗಿ ಸ್ನಾನ ಮಾಡಿ ನಾಗನ ಪೂಜೆಗೆ ತೆರಳಬೇಕೆಂದರೆ ಚರಂಡಿಯಿಂದ ಹರಿಯುತ್ತಿರುವ ಹೊಲಸು ನೀರಿನ ಮೇಲೆಯೇ ಸಾಗಬೇಕಿದೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ನಾಗನಿಗೆ ತನು ಸಮರ್ಪಿಸಲೂ ಇಲ್ಲಿನ ಜನರಿಗೆ ಸಾಧ್ಯವಾಗುತ್ತಿಲ್ಲ.

UDP-17-4A-Nitturu
ದುಗ್ಗಣಬೆಟ್ಟು ಮುಖ್ಯರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು.

ಸ್ಪಂದಿಸದ ಅಧಿಕಾರಿಗಳು

ಒಳಚರಂಡಿ ಬ್ಲಾಕ್​ ಆಗಿ ಹೊಲಸು ನೀರು ಊರನ್ನೆಲ್ಲ ಆವರಿಸಿ, ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗೂ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ತಿಳಿಸಿದರೆ, ಸರ್ಕಾರದಿಂದ ಅನುದಾನ ಬಂದ ಬಳಿಕ ಸರಿಪಡಿಸುವುದಾಗಿ ತಿಳಿಸುತ್ತಾರೆ. ಬ್ಲಾಕ್​ ಆಗಿರುವ ಒಳಚರಂಡಿಯನ್ನು ನಾವೇ ಮಣ್ಣುಹಾಕಿ ಮುಚ್ಚುತ್ತೇವೆ ಎಂದರೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬೆದರಿಸುತ್ತಾರೆ. ಹಾಗಾದರೆ ನಾವು ಏನು ಮಾಡಬೇಕು ಎಂದು ಸಮಸ್ಯೆ ಅನುಭವಿಸುತ್ತಿರುವ ಸ್ಥಳೀಯ ಮಹಿಳೆ ಪ್ರಮೀಳಾ ಶೆಟ್ಟಿ ಪ್ರಶ್ನಿಸಿದ್ದಾರೆ.

ಸಿಎಂ ಗಮನ ಸೆಳೆಯುವಂತೆ ಪ್ರತಿಭಟಿಸುತ್ತೇವೆ

Nityananda Olakadu
ನಿತ್ಯಾನಂದ ಒಳಕಾಡು. ಸಮಾಜ ಸೇವಕ

ಜಿಲ್ಲಾಡಳಿತ ಹಾಗೂ ನಗರಸಭೆಯವರೂ ಒಳಚರಂಡಿ ನೀರಿನಿಂದ ಆಗುತ್ತಿರುವ ಸಮಸ್ಯೆ ನಿವಾರಿಸದ್ದರಿಂದ ನಿಟ್ಟೂರು ವಾರ್ಡ್​ನ ಜನರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಲ್ಲಿ ನೆರವಿಗೆ ಬರುವಂತೆ ಕೇಳಿಕೊಂಡಿದ್ದಾರೆ. ಸ್ಥಳಕ್ಕೆ ಮಾಧ್ಯಮದವರೊಂದಿಗೆ ತೆರಳಿದ ಅವರು, ಒಳಚರಂಡಿ ಹೊಲಸು ನೀರಿನಿಂದ ನಿಟ್ಟೂರು ಹಾಗೂ ದುಗ್ಗಣಬೆಟ್ಟು ಪರಿಸರದಲ್ಲಿ ಆದ ಸಮಸ್ಯೆ ತೋರಿಸಿದ್ದಾರೆ. ತ್ವರಿತವಾಗಿ ಒಳಚರಂಡಿ ಸರಿಪಡಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net