

ಹುಬ್ಬಳ್ಳಿ: ಹತ್ಯೆಯಾದ ಅಂಜಲಿ ಅಂಬಿಗೇರ ಪ್ರಕರಣದ ತನಿಖೆಯು ನಗರದಲ್ಲಿ ಭಾನುವಾರವೂ ಮುಂದುವರಿದಿದೆ. ಅಂಜಲಿ ಹಂತಕ ಗಿರೀಶ ಸಾವಂತನನ್ನು ಇಲ್ಲಿಯ ಸರ್ಕ್ಯೂಟ್ ಹೌಸ್‌ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ತೀವ್ರ ವಿಚಾರಣೆ ನಡೆಸಿದರು.
ದಾವಣಗೆರೆಯಲ್ಲಿ ಗಿರೀಶನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಗದಗ ಮೂಲದ ಲಕ್ಷ್ಮೀ ಎಂಬಾಕೆಯನ್ನು ಕರೆಯಿಸಿದ್ದ ಸಿಐಡಿ ಅಧಿಕಾರಿಗಳು, ಹಂತಕ ಗಿರೀಶನ ಮುಂದೆಯೇ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಲಕ್ಷ್ಮೀ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಗಿರೀಶನನ್ನು ಬೆಂಡಿಗೇರಿ ಪೊಲೀಸ್ ಠಾಣೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಿರಂಜನ ಹಿರೇಮಠ ಜತೆ ಚರ್ಚೆ: ನೇಹಾ ಹಿರೇಮಠ ಹತ್ಯೆ ಪ್ರಕರಣ ಕುರಿತು ನೇಹಾ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಜತೆಗೆ ಸಿಐಡಿ ಅಧಿಕಾರಿಗಳು ಐಬಿಯಲ್ಲಿ ಚರ್ಚೆ ಮಾಡಿದ್ದಾರೆ. ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದರಿಂದ ಪರಾಮರ್ಶೆ ನಡೆಸಿದ್ದಾರೆ ಎನ್ನಲಾಗಿದೆ.
ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕೆಲ ಸಿಐಡಿ ಅಧಿಕಾರಿಗಳು, ಅಂಜಲಿ ಅಂಬಿಗೇರ ಪ್ರಕರಣದ ತನಿಖಾ ತಂಡದಲ್ಲಿಯೂ ಇದ್ದಾರೆ. ಈ ಹಿನ್ನೆಲೆಯಲ್ಲಿ ನಿರಂಜನ ಹಿರೇಮಠ ಅವರನ್ನು ಕರೆಯಿಸಿ ವಿಚಾರಿಸಿದ್ದಾರೆ ಎನ್ನಲಾಗುತ್ತಿದೆ.