

ಕಲಬುರಗಿ: ಕುಡಿತದಿಂದ ಉಂಟಾದ ಅನಾರೋಗ್ಯದಿಂದ ತಾಳದೆ ಜಿಗುಪ್ಸೆಯಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಿಣಜಗಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ (೩೨) ಆತ್ಮಹತ್ಯೆಗೆ ಒಳಗಾದವ. ಶಿವಾನಂದ್‌ಗೆ ಮದುವೆಯಾಗಿದ್ದು, ಎರಡುವರೆ ವರ್ಷದ ಗಂಡು, ಎರಡುವರೆ ತಿಂಗಳಿನ ಹೆಣ್ಣು ಮಗುವಿದೆ. ಕೂಲಿ ಕೆಲಸ ಮಾಡುತ್ತಿದ್ದ ಶಿವಾನಂದ ಕುಡಿತದ ಚಟಕ್ಕೆ ಒಳಗಾಗಿದ್ದ, ಹಲವು ಬಾರಿ ಬುದ್ಧಿವಾದ ಹೇಳಿದರೂ ಚಟ ಬಿಟ್ಟಿರಲಿಲ್ಲ. ಜ.೧೨ರಂದು ಮನೆಯಲ್ಲಿ ವಾದಿಸುತ್ತಿದ್ದಾಗ ಬಾಯಲ್ಲಿ ರಕ್ತ ಬಂದಿದ್ದು, ಆಸ್ಪತ್ರೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದ. ಆವತ್ತು ಮನೆಗೆ ಬಂದಿರಲಿಲ್ಲ. ಜ.೧೩ರಂದು ಮನೆಯವರೆಲ್ಲರೂ ಕೂಡಿ ಹುಡುಕಾಡುವಾಗ ತಾಡತೆಗನೂರ ಸೀಮಾಂತರದ ಬಾವಿಯೊಂದರಲ್ಲಿ ದೇಹ ತೇಲುತ್ತಿತ್ತು. ಕುಡಿತದ ಚಟದಿಂದ ಹೊರಬರಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಹೋದರ ಬಸವರಾಜ ನಾಟಿಕಾರ ನೀಡಿದ ದೂರಿನಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.