

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಅಧ್ಯಯನ ನಡೆಸಿದ ದ್ವಿ ಸದಸ್ಯರ ಕೇಂದ್ರ ತಂಡಕ್ಕೆ, ಸೋಯಾಬೀನ್ ಸೇರಿ ಇನ್ನಿತರ ಪ್ರಮುಖ ಬೆಳೆಗಳು ಸಂಪೂರ್ಣ ಹಾನಿಗೊಂಡಿರುವುದು ಮನದಟ್ಟಾಯಿತು.
ಹೈದ್ರಾಬಾದ್‌ನ ಕೃಷಿ ಇಲಾಖೆಯ ಎಣ್ಣೆ ಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಜೆ.ಗುರುಪ್ರಸಾದ್ ಅವರಿಗೆ, ಒಣಗಿ ನಿಂತ ಸೋಯಾಬೀನ್ ಬೆಳೆ ಸ್ವಾಗತಿಸಿತು. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿದ ಅಧಿಕಾರಿಗಳಿಗೆ ‘ಬೆಳೆ ಹಾನಿಯ ವ್ಯಥೆ’ ಅರಿವಾಯಿತು. ರೈತರಿಂದ ಅವರು ಮಾಹಿತಿ ಕಲೆಹಾಕಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಹುಕ್ಕೇರಿ, ಗೋಕಾಕ ಸೇರಿದಂತೆ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆಹಾನಿಯ ಕುರಿತು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಪ್ರತಿ ವರ್ಷವೂ ಗೋಳು: ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮಕ್ಕೆ ಭೇಟಿ ನೀಡಿದ ತಂಡವು ಅತಿವೃಷ್ಟಿಯಿಂದ ಹಾನಿಯಾದ ಸೋಯಾಬೀನ್ ಬೆಳೆ ಹಾನಿ ಪರಿಶೀಲಿಸಿತು. ಈ ವೇಳೆ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿ ವರ್ಷವೂ ಬೆಳೆ ಹಾನಿಯಾಗುತ್ತಿದೆ ಎಂದು ಅಧ್ಯಯನ ತಂಡದ ಗಮನಕ್ಕೆ ತಂದರು.
ಸ್ಥಳೀಯ ರೈತರು ಮಾತನಾಡಿ, ಸೋಯಾಬಿನ್ ಬೆಳೆ ಕಟಾವಿಗೆ ಬಂದಿತ್ತು. ಬ್ಯಾಂಕ್‌ನಿಂದ ಸಾಲ ಪಡೆದು ಎಕರೆಗೆ 15 ಸಾವಿರ ಖರ್ಚು ಮಾಡಿದ್ದೆವು. ಅಲ್ಲದೆ, ಈ ಬಾರಿ ಎಕರೆಗೆ 15 ಕ್ವಿಂಟಾಲ್ನಷ್ಟು ಸಲು ನಿರೀಕ್ಷೆ ಇತ್ತು. ಆದರೆ, ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ಅಳಲು ತೋಡಿಕೊಂಡರು. ತಂಡದ ಮುಖ್ಯಸ್ಥ ಮನೋಹರನ್ ಅವರು ರೈತರ ಬಳಿ ಕಬ್ಬು ಸೇರಿ ಮುಂಗಾರು ಹಂಗಾಮಿನ ಮೆಕ್ಕೆಜೋಳ, ಶೇಂಗಾ, ಹೆಸರು ಸೇರಿದಂತೆ ಇನ್ನಿತರ ಪ್ರಮುಖ ಬೆಳೆಗಳ ನಷ್ಟದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಕ್ರಿಯಿಸಿ, ಬಡಕುಂದ್ರಿ ಗ್ರಾಮದಲ್ಲಿ 30 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ಕೇಂದ್ರ ತಂಡದ ಅಧಿಕಾರಿಗಳಿಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಕೋಳೆಕರ,, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ನದಿ ದಂಡೆ ಅಗಲೀಕರಣಗೊಳಿಸಲು ರೈತರ ಒತ್ತಾಯ ಹಿರಣ್ಯಕೇಶಿ ನದಿ ದಂಡೆಯಲ್ಲಿರುವ ಚೌಗಲಾ ಎಂಬುವರ ಜಮೀನನಲ್ಲಿ ಸೋಯಾಬಿನ್, ಪಕ್ಕದಲ್ಲಿದ್ದ ಕಬ್ಬು ಹಾಗೂ ಹೊಸೂರಿನಲ್ಲಿ ಗಜ್ಜರಿ ಬೆಳೆಹಾನಿಯನ್ನು ಕೇಂದ್ರ ತಂಡ ಪರಿಶೀಲಿಸಿತು. ಈ ವೇಳೆ ಸ್ಥಳೀಯ ರೈತರು ಮಾತನಾಡಿ, ಗಜ್ಜರಿಯಿಂದ ಎಕರೆಗೆ ಮೂರು ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ, ಬೆಳೆಹಾನಿಯಿಂದಾಗಿ ನಮಗೆ ದಿಕ್ಕು ತೋಚದಂತಾಗಿದೆ. ಪ್ರತಿವರ್ಷ ಬೆಳೆಹಾನಿ ತಪ್ಪಿಸಬೇಕೆಂದರೆ ಹಿರಣ್ಯಕೇಶಿ ನದಿ ದಂಡೆ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಪಕ್ಕದ ಇಂಗಳಿ ಗ್ರಾಮದ ಕಲ್ಲಪ್ಪ ಅವರ ಜಮೀನಿನಲ್ಲಿ ಹಿನ್ನೀರಿನಿಂದ ಹಾನಿಗೊಳಗಾದ ಮೆಕ್ಕೆಜೋಳದ ಬೆಳೆಯನ್ನು ಅಧಿಕಾರಿಗಳು ಪರಿಶೀಲಿಸಿದರು.