ಭಜಕರ ಅವಹೇಳನ, ದುರ್ನಡತೆ ತೋರಿದ ಉಪ ವಲಯ ಅರಣ್ಯಾಧಿಕಾರಿ ಅಮಾನತು

sanjeeva
Published on

ಕಡಬ: ಹಿಂದು ಸಂಘಟನೆಗಳನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭಜಕರ ಬಗ್ಗೆ ನಿಂದನೆ, ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಉಢಾಪೆಯಾಗಿ ವರ್ತನೆ ಮತ್ತಿತರ ಆರೋಪಗಳ ಕುರಿತಂತೆ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಂಜೀವ ಪೂಜಾರಿ ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರಗಳ ಕುರಿತು ಅವಹೇಳನಕಾರಿಯಾಗಿ ಬರೆದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ತಿಂಗಳ ಹಿಂದೆ ಭಜಕರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ದುರ್ನಡತೆ, ಅಗೌರವ, ಭಜನೆ ಮತ್ತು ಭಜಕರ ವಿರುದ್ಧ ಕೀಳುಮಟ್ಟದ ಬರಹ ಮೂಲಕ ಸಾಮಾಜಿಕ ಶಾಂತಿ ಕೆಡಿಸಲು ಕಾರಣಕರ್ತರಾಗಿರುವ ಅಧಿಕಾರಿಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಅರಣ್ಯ ಇಲಾಖೆ ಪತ್ರ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net