ಡ್ರೆಜ್ಜರ್ ತೆರವುಗೊಳಿಸದಿದ್ದರೆ ಅಪಾಯ

dredger
Published on

ಮಂಗಳೂರು: ಸುರತ್ಕಲ್ ಬಳಿಯ ಗುಡ್ಡೆಕೊಪ್ಲ ಬೀಚ್‌ನಲ್ಲಿರುವ ಭಗವತಿ ಪ್ರೇಮ್ ಡೆಜ್ಜರನ್ನು ತಕ್ಷಣ ತೆರವುಗೊಳಿಸದಿದ್ದರೆ ಪರಿಸರ ಹಾಗೂ ಸ್ಥಳೀಯ ಭೂಪ್ರದೇಶಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ವೇಲ್ ನೇತೃತ್ವದ ತಜ್ಞರ ತಂಡ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ಅಧ್ಯಯನ ವರದಿ ಸಲ್ಲಿಸಿದೆ.

ಹಡಗು 60 ಮೀಟರ್ ಉದ್ದವಿದ್ದು ಬೀಚ್‌ಗೆ ಅಡ್ಡಲಾಗಿ ನಿಂತಿದೆ. ಇದರಿಂದ ಮೀನುಗಾರಿಕೆಗೂ ತೊಂದರೆಯಾಗಿದೆ. ಹಾಗೇ ಬಿಟ್ಟರೆ ನಿಧಾನವಾಗಿ ನೀರಿನ ಆಳಕ್ಕೆ ಕುಸಿಯಲಿದೆ. ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಸಮುದ್ರ ಕೊರೆತಕ್ಕೂ ಕಾರಣವಾಗಬಹುದು. ಈಗಾಗಲೇ ಹಡಗಿನ ಸುತ್ತ ಮರಳು ಆವರಿಸಿದ್ದು, ಮತ್ತಷ್ಟು ಕಾಲ ಇದ್ದರೆ ಅದನ್ನು ತೆರವುಗೊಳಿಸಲು ಡ್ರೆಜ್ಜಿಂಗ್ ಮಾಡಬೇಕಾಗುತ್ತದೆ. ಹಡಗಿನಲ್ಲಿ ಬೃಹತ್ ಪ್ರಮಾಣದಲ್ಲಿರುವ ಡೀಸೆಲ್ ಮತ್ತು ಆಯಿಲ್ ಪ್ರಸ್ತುತ ಸೋರಿಕೆಯಾಗುತ್ತಿಲ್ಲ. ಸೋರಿಕೆ ಸಾಧ್ಯತೆಯೂ ಇದೆ. ಆದ್ದರಿಂದ ಅದನ್ನು ಸುರಕ್ಷಿತವಾಗಿ ತೆರವುಗೊಳಿಸಬೇಕು. ಅದೇ ಸ್ಥಳದಲ್ಲಿ ಒಡೆಯುವ ಕೆಲಸವೂ ಸಾಧುವಲ್ಲ, ಗುಜರಾತ್ ಅಥವಾ ಮುಂಬೈ ಶಿಪ್‌ಯಾರ್ಡ್‌ಗೆ ತೆಗೆದುಕೊಂಡು ಹೋಗಬೇಕು ಎಂದು ಹಡಗು ಇರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಮನವಿ ಮಾಡಿದ್ದಾರೆ.

ಗೋವಾದ ಕಾಂಡೋಲಿನ್ ಬೀಚ್‌ನಲ್ಲಿ ಡ್ರೆಜ್ಜರ್ ಹಡಗೊಂದು ಕಾನೂನು ತೊಡಕಿನಿಂದ 10 ವರ್ಷಗಳ ಕಾಲ ಬಾಕಿಯಾಗಿತ್ತು. ಪರಿಣಾಮ ಸಂಪೂರ್ಣ ಭೌಗೋಳಿಕ ಪರಿಸರ ನಾಶವಾಗಿ, ಸುಂದರವಾಗಿದ್ದ ಬೀಚ್ ಈಗ ಪಾಳುಬಿದ್ದಿದೆ. ಆಗ ನಾನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಲಹೆಗಾರನಾಗಿದ್ದೆ. ಹಾಗಾಗಿ ಈ ಹಡಗನ್ನೂ ತೆರವುಗೊಳಿಸಲು ಮನವಿ ಮಾಡಿದ್ದೇನೆ. ಇಲ್ಲದಿದ್ದರೆ ಸುರತ್ಕಲ್ ಬೀಚ್‌ಗೆ ಮಾತ್ರವಲ್ಲ, ತೈಲ, ಆಯಿಲ್ ಸೋರಿಕೆಯಿಂದ ಮೀನುಗಾರರಿಗೂ ಸಮಸ್ಯೆಯಾಗಬಹುದು. - ಡಾ.ಸೆಂಥಿಲ್ ವೇಲ್, ಫಿಶರೀಸ್ ಕಾಲೇಜು ಡೀನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net