ನಿರಂತರ ಶ್ರಮದಿಂದ ಕನಸು ನನಸಾಗಲು ಸಾಧ್ಯ : ಪಿ.ಅನೂಷಾ ವಿದ್ಯಾರ್ಥಿಗಳಿಗೆ ಸಲಹೆ

23
Published on

ಮೈಸೂರು:  ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು. ಅದನ್ನು ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಅನೂಷಾ ವಿದ್ಯಾರ್ಥಿಗಳಿಗೆ ಹೇಳಿದರು.

ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯು ಕಳೆದ ಐವತ್ತು ದಿನಗಳಿಂದ ನಡೆಸುತ್ತಿರುವ ತೊಂಬತ್ತು ದಿನಗಳ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಎರಡನೇ ದಿನದ ಕಾರ್ಯಾಗಾರದಲ್ಲಿ ಅವರು ಬುಧವಾರ ವಿಶೇಷ ಉಪನ್ಯಾಸ, ಸಂವಾದ ನಡೆಸಿಕೊಟ್ಟರು.

ನಮ್ಮ ಕೆಲಸದ ಮೇಲೆ ನಾವೇ ನಂಬಿಕೆ ಮತ್ತು ಭರವಸೆಗಳನ್ನು ಇಡಬೇಕು. ಸಾಧನೆಗಳು ಪ್ರಥಮ ಹೆಜ್ಜೆಯಿಂದಲೇ ಆರಂಭವಾಗುತ್ತದೆ. ನಿರಂತರ ಪ್ರಯಾಣದ ನಂತರ ನಮ್ಮ ಕನಸು ನನಸಾಗುತ್ತದೆ. ಉದ್ಯೋಗದಲ್ಲಿ ಹಲವು ಕ್ಷೇತ್ರಗಳಿವೆ. ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತಹ ಹುದ್ದೆಗಳನ್ನು ಆಯ್ದುಕೊಂಡರೆ ಮಾತ್ರ ನಿಮ್ಮ ವೃತ್ತಿ ಜೀವನದಲ್ಲಿ ಹೆಸರು, ಯಶಸ್ಸು, ಕೀರ್ತಿ, ಸಂತೃಪ್ತಿ ಕಾಣಲು ಸಾಧ್ಯ ಎಂದರು.

ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಇಂಜಿನಿಯರಿಂಗ್, ಮೆಡಿಕಲ್ ಹೋಗದೆ ಭಿನ್ನ ಆಯ್ಕೆ ಮಾಡಿಕೊಳ್ಳಲು ಮುಂದಾದೆ. ನನ್ನ ತಂದೆ ಕೃಷಿ ಪದವಿ ಮಾಡಲು ಹೇಳಿದರು. ಆದರೆ ನನಗೆ ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಲ್ಲಿ ಬರುವ ಕಾಡಿನ ಕಥೆಗಳಿಗೆ ಮನಸೋತು ಅರಣ್ಯಾಧಿಕಾರಿಯೇ ಆಗಬೇಕು ಎಂದು ದೃಢ ನಿಶ್ಚಯ ಮಾಡಿದೆ. ಬಿ.ಎಸ್ಸಿ. ಫಾರೆಸ್ಟ್ ಕೋರ್ಸ್ ಆಯ್ಕೆ ಮಾಡಿಕೊಂಡೆ. ಇದಕ್ಕಾಗಿ ನಮ್ಮ ತಂದೆ, ಬಂಧು-ಬಳಗ, ಗೆಳತಿಯರ ವಿರೋಧ ಎದುರಿಸಬೇಕಾಯಿತು. ಹೆಣ್ಣುಮಕ್ಕಳಿಗೆ ಇದು ಬೇಡ. ಫಾರೆಸ್ಟ್ ಕೋರ್ಸಿನಿಂದ ಸುಮ್ಮನೆ ನಾಲ್ಕು ವರ್ಷ ವ್ಯರ್ಥ ಅಂತ ನನ್ನ ಉತ್ಸಾಹ ಕುಗ್ಗಿಸುವ ವಾತಾವರಣ ಸೃಷ್ಟಿಯಾದರೂ ಅದಕ್ಕೆ ಧೃತಿಗೆಡಲಿಲ್ಲ. ಗಟ್ಟಿಯಾಗಿ ನಿಂತು ಇಂದು ಅರಣ್ಯಾಧಿಕಾರಿಯಾದೆ ಎಂದರು.

ಹೆಣ್ಣು ಮಕ್ಕಳಿಗೆ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ಬಹುಕಷ್ಟದ ಕೆಲಸ ಎಂದು ಹೇಳುವವರ ಮುಂದೆಯೇ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನನ್ನಂತೆ ಅನೇಕ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಇಂತಹ ಗಟ್ಟಿ ನಿರ್ಧಾರ ಮಾಡಿದ್ದರ ಫಲವೇ ಈಗ ನಿಮ್ಮ ಮುಂದೆ ನನ್ನನ್ನು ತಂದು ನಿಲ್ಲಿಸಿದೆ ಎಂದರು.

ಯುಪಿಎಸ್ಸಿಗೆ ತಯಾರಾಗಲು ಇಂದು ಅತಿಹೆಚ್ಚು ಸಂಪನ್ಮೂಲ, ಸಾಮಗ್ರಿಗಳು ಇವೆ. ಹಾಗಂತ ಎಲ್ಲವನ್ನೂ ಓದಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದು ಒಳ್ಳೆಯ ಪುಸ್ತಕವನ್ನು ಆಯ್ಕೆಮಾಡಿಕೊಂಡು ಓದಬೇಕು. ಓದು ಮತ್ತು ಬರಹ ಎರಡೂ ಜತೆ ಜತೆಯಾಗಿ ಸಾಗಬೇಕು. ಮೂಲ ಪಠ್ಯಗಳನ್ನು ಓದಿ ಗ್ರಹಿಸಿಕೊಂಡರೆ ಮಾತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಚ್.ಎಂ.ರಾಜಶೇಖರ್ ಮಾತನಾಡಿ, ಯುಪಿಎಸ್ಸಿ ಪರೀಕ್ಷೆಗಳನ್ನು ಸತತವಾಗಿ ಎದುರಿಸುತ್ತಾ ಇರಬೇಕು. ಆರಂಭದಲ್ಲಿ ಸೋಲುಗಳಾಗುತ್ತವೆ, ಅದಕ್ಕೆ ಎದೆಗುಂದಬಾರದು. ಬದಲಾಗಿ ತಪ್ಪುಗಳಿಂದ ಪಾಠ ಕಲಿಯುತ್ತಾ ಸಾಗಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.

ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಕೃ.ಪ.ಗಣೇಶ, ಡಾ.ಎಸ್‌ಬಿಎಂ ಪ್ರಸನ್ನ, ಕೆ.ವೈ.ನಾಗೇಂದ್ರ, ಪ್ರೊ.ಕಿರಣ್ ಕೌಶಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net