

ಅನ್ಸಾರ್ ಇನೋಳಿ ಉಳ್ಳಾಲ
ಮಂಗಳೂರು(ಉಳ್ಳಾಲ) ಕ್ಷೇತ್ರದಲ್ಲಿ ಶಾಸಕ ಯು.ಟಿ.ಖಾದರ್ ಅವರ ಕನಸಿನ ಬೃಹತ್ ಯೋಜನೆಗಳು ಇನ್ನೂ ಗುರಿ ಮುಟ್ಟಿಲ್ಲ. ಒಂದು ಯೋಜನೆಗೆ ವಿರೋಧದ ಸವಾಲು ಎದುರಾದರೆ, ಮತ್ತೊಂದು ಯೋಜನೆಗೆ ಹಣಕಾಸಿನ ಸಮಸ್ಯೆ. ಭಾರಿ ನಿರೀಕ್ಷೆಯ ಈ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳ್ಳಬಹುದೇ ಎನ್ನುವ ಪ್ರಶ್ನೆ ಜನರದ್ದಾಗಿದೆ.
ರಾಜ್ಯದಲ್ಲೇ ಐತಿಹಾಸಿಕವೆನಿಸಿರುವ 198 ಕೋಟಿ ರೂ. ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ 2019ರಲ್ಲೇ ಆರಂಭಗೊಂಡಿದ್ದು, ಮೊದಲ ಹಂತದ ಕಾಮಗಾರಿ ಮುಗಿದಿದೆ. ಉಳ್ಳಾಲಕ್ಕೆ ಪ್ರತಿದಿನ 8 ಎಂಎಲ್ಡಿ ನೀರು ಅಗತ್ಯವಿದೆ. ಮನಪಾದಿಂದ ಕೇವಲ ಒಂದೂವರೆ ಎಂಎಲ್ಡಿ ನೀರು ಪೂರೈಕೆಯಾಗುತ್ತಿದ್ದು, ಬೇಸಿಗೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಬೆಯಿಂದ ನೇರವಾಗಿ ಉಳ್ಳಾಲಕ್ಕೆ ನೀರು ತರುವ ಯೋಜನೆ ಶಾಸಕ ಯು.ಟಿ.ಖಾದರ್ ರೂಪಿಸಿದ್ದಾರೆ. ಆಲಾಡಿ ನೇತ್ರಾವತಿ ತೀರದಲ್ಲಿ ಆರ್ಸಿಸಿ ಚೇಂಬರ್ ಮತ್ತು ಪಂಪ್ಹೌಸ್ ನಿರ್ಮಿಸಿ 965 ಮಿ.ಮೀ. ವ್ಯಾಸ, 16 ಮಿ.ಮೀ. ದಪ್ಪದ 15,500 ಮೀಟರ್ ಉದ್ದದ ಎಂ.ಎಸ್. ಪೈಪ್ ಬಳಸಿ ಕಂಬಳಪದವಿಗೆ ನೀರು ತರಲಾಗುತ್ತದೆ. ಇದಕ್ಕಾಗಿ ಕಂಬಳಪದವಿನಲ್ಲಿರುವ ಎತ್ತರದ ಪ್ರದೇಶದಲ್ಲಿ 600 ಲಕ್ಷ ಲೀಟರ್ ನೀರು ಶುದ್ಧೀಕರಣ ಸಾಮರ್ಥ್ಯದ ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಮುಗಿದಿದೆ. ಪಕ್ಕದಲ್ಲೇ 200 ಲಕ್ಷ ಲೀಟರ್ ನೀರು ಸಂಗ್ರಹದ ಟ್ಯಾಂಕ್ ನಿರ್ಮಿಸಲಾಗಿದೆ. ಇಲ್ಲಿಂದ ಉಳ್ಳಾಲದಾದ್ಯಂತ ನೀರು ಸರಬರಾಜು ಮಾಡಬೇಕಿದ್ದು, ಇದಕ್ಕಾಗಿ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿ 80 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದೆ.
24 ಗಂಟೆಯೂ ನೀರು ಪೂರೈಸುವ ಯೋಜನೆ 2022ರಲ್ಲೇ ಪೂರ್ಣಗೊಳ್ಳಬೇಕಿತ್ತು. ಪೈಪ್ಲೈನ್ ಕೆಲಸ ಮುಗಿಯದೆ ಸಮಸ್ಯೆಯಾಗಿದೆ. ಈ ಯೋಜನೆ ಆರಂಭಗೊಳ್ಳದ ಕಾರಣ ಎರಡನೇ ಹಂತದ 282 ಕೋಟಿ ರೂ. ಮೊತ್ತದ ಕಾಮಗಾರಿಗೆ ತೊಡಕಾಗಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 1.20 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ಮೀನುಗಾರಿಕೆ ಪ್ರಧಾನವಾಗಿದೆ. ಸಯ್ಯಿದ್ ಮದನಿ ದರ್ಗಾ, ಭಗವತೀ ದೇವಸ್ಥಾನ ಸಹಿತ ಪ್ರಸಿದ್ಧ ಕ್ಷೇತ್ರಗಳೂ ಇವೆ. ಸೋಮೇಶ್ವರ ಸೋಮನಾಥ ದೇವಸ್ಥಾನಕ್ಕೂ ಉಳ್ಳಾಲವೇ ಸಂಪರ್ಕ ಸೇತು. ವಸತಿ ಸಂಕೀರ್ಣಗಳು, ಮೀನಿನ ಕಾರ್ಖಾನೆಗಳು ಇಲ್ಲಿದ್ದು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಖಾದರ್ ಮುತುವರ್ಜಿಯಲ್ಲಿ ಕೋಡಿಯಲ್ಲಿ ದ್ರವತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣಗೊಂಡಿದೆ. ಮನೆ, ಫ್ಲ್ಯಾಟ್ಗಳ ದ್ರವತ್ಯಾಜ್ಯ ಹರಿದು ಬಂಡಿಕೊಟ್ಯ, ಕೈಕೋ ಹಾಗೂ ಕೋಡಿ ವೆಟ್ವೆಲ್ನಲ್ಲಿ ಸಂಗ್ರಹವಾಗಿ ಮುಖ್ಯ ಘಟಕಕ್ಕೆ ಹರಿದು ಬರಬೇಕು. ಇದಕ್ಕಾಗಿ ಬಂಡಿಕೊಟ್ಯ ಮತ್ತು ಕೋಡಿಯಲ್ಲಿ ವೆಟ್ವೆಲ್ ನಿರ್ಮಿಸಲಾಗಿದ್ದರೆ, ಕೈಕೋದಲ್ಲಿ ಎಂಎಲ್ಸಿಯೊಬ್ಬರ ಜಮೀನು ಇದ್ದು ಅವರೊಂದಿಗೆ ಸೇರಿಕೊಂಡು ಸ್ಥಳೀಯರೂ ವಿರೋಧ ವ್ಯಕ್ತಪಡಿಸಿದ್ದರಿಂದ ವೆಟ್ವೆಲ್ ಕಾಮಗಾರಿಯೇ ಆರಂಭಗೊಂಡಿಲ್ಲ. ಇದರಿಂದಾಗಿ ದ್ರವತ್ಯಾಜ್ಯ ಘಟಕ ಕಾಮಗಾರಿಗೆ ಅಡ್ಡಿಯಾಗಿದೆ.
ಉಳ್ಳಾಲದಲ್ಲಿ ಕಡಲ್ಕೊರೆತ ಮುಗಿಯದ ಸಮಸ್ಯೆ. ಮೊಗವೀರಪಟ್ಣದಲ್ಲಿ 2014ರಲ್ಲಿ ಶಾಶ್ವತ ಪರಿಹಾರ ಕಾಮಗಾರಿ 249 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡು ಕೆಲವರ್ಷಗಳಲ್ಲಿ ಮುಗಿದು ಅಲ್ಲಿನ ಸಮಸ್ಯೆಗೆ ಒಂದು ಹಂತದ ಪರಿಹಾರ ದೊರಕಿತ್ತು. ಇದರಿಂದಾಗಿ ಮುಕ್ಕಚ್ಚೇರಿ, ಕಿಲೆರಿಯಾ ನಗರ, ಕೈಕೋ, ಸೋಮೇಶ್ವರದ ಬಟ್ಟಪ್ಪಾಡಿ, ಉಚ್ಚಿಲದಲ್ಲಿ ಸಮಸ್ಯೆ ಆರಂಭವಾಗಿದೆ. ಇಲ್ಲಿಯೂ ಶಾಶ್ವತ ಪರಿಹಾರ ಕಾಮಗಾರಿ ಆರಂಭಗೊಂಡಿದ್ದರೂ ನಿಗದಿತ ಗುರಿ ತಲುಪದ ಕಾರಣ ಪ್ರತಿವರ್ಷ ಮನೆ, ವಸತಿಗೃಹಗಳು ಸಮುದ್ರ ಪಾಲಾಗುವುದು ಸಾಮಾನ್ಯ ಎನಿಸಿದೆ. ತಾತ್ಕಾಲಿಕ ಕಾಮಗಾರಿಗೆ ಅನುದಾನ ಸಿಗದ ಕಾರಣ ಕೆಲವು ಮನೆಗಳು, ಉಚ್ಚಿಲದಲ್ಲಿ ರಸ್ತೆ ಸಮುದ್ರ ಪಾಲಾಗಿತ್ತು. ಕಳೆದ ವರ್ಷ ಮುಖ್ಯಮಂತ್ರಿ ಸಹಿತ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಟ್ಟಪ್ಪಾಡಿಯಲ್ಲಿ ಸೀ ವೇವ್ ಬ್ರೇಕರ್ ತಂತ್ರಜ್ಞಾನ ಬಳಸಿ ಶಾಶ್ವತ ಕಾಮಗಾರಿ ನಡೆಸಲಾಗುವುದು ಎಂದು ಭರವಸೆಯನ್ನೂ ನೀಡಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬಂದಿದ್ದು, ಶಾಶ್ವತ ಕಾಮಗಾರಿ ನಿರೀಕ್ಷೆ ಜನರಲ್ಲಿದೆ.
ಕುಡಿಯುವ ನೀರಿನ ಯೋಜನೆ ಆದಷ್ಟು ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆದರೆ ದ್ರವತ್ಯಾಜ್ಯ ಘಟಕಕ್ಕೆ ಸ್ಥಳೀಯ ಜನರ ಸಹಕಾರ ಅಗತ್ಯ. ವೈಜ್ಞಾನಿಕ ರೀತಿಯಲ್ಲಿ ಘಟಕ ನಿರ್ಮಾಣ ಆಗಿದ್ದರೂ ಜನರಲ್ಲಿರುವ ತಪ್ಪು ಭಾವನೆಯಿಂದ ಯೋಜನೆಗೆ ಅಡ್ಡಿಯಾಗಿದೆ.- ಸುರೇಶ್ ಭಟ್ನಗರ, ಸಾಮಾಜಿಕ ಮುಖಂಡ ವಿವಿಧ ಕಾರಣಗಳಿಂದಾಗಿ ಕುಡಿಯುವ ನೀರು ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ಖಾಸಗಿ ಜಮೀನಿನವರಿಂದಾಗಿ ಕೈಕೋದಲ್ಲಿ ವೆಟ್ವೆಲ್ ಕಾಮಗಾರಿ ನಡೆದಿಲ್ಲ. ಸ್ಥಗಿತಗೊಂಡಿರುವ ಹಾಗೂ ಪುನರ್ಜೀವಗೊಳ್ಳಬೇಕಾದ ಯೋಜನೆಗಳನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾದರಿಯಾಗಿ ರೂಪಿಸಲಾಗುವುದು.- ಯು.ಟಿ.ಖಾದರ್, ಶಾಸಕ https://www.vijayavani.net/mangalore-city-corporation-not-prepared-for-rainy-season https://www.vijayavani.net/mcc-mangalore-city-online