ವಿಜಯಪುರ ಸ್ಟಾರ್ಟ್ ಅಪ್ ಹಬ್ ಮಾಡುವ ಕನಸು; ವಿಪ ಸದಸ್ಯ ಸುನೀಲಗೌಡ ಪಾಟೀಲ

BLDE HAK VIWE
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪ್ರಾರಂಭವಾದ ಶ್ರೀ ಬಿ. ಎಂ. ಪಾಟೀಲ ಫೌಂಡೇಶನ್ ಹ್ಯಾಕ್ ವ್ಯೆಹ್- 2025 ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ಸಿಇಒ ಸಂತೋಷ ಕೊಟ್ನಿಸ್, ಡಾ. ವಿ. ಜಿ ಸಂಗಮ, ಎಸ್. ಬದರಿ ನಾರಾಯಣ, ಡಾ. ಆರ್.ವಿ. ಕುಲಕರ್ಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರತಿಷ್ಠಿತ ಶ್ರೀ ಬಿ.ಎಂ. ಪಾಟೀಲ ಫೌಂಡೇಶನ್ ಫಾರ್ ಇನ್ನೋವೇಶನ್ ಆಂಡ್ ಇನ್‌ಕ್ಯೂಬೇಶನ್ ವತಿಯಿಂದ ವಿಜಯಪುರವನ್ನು ಸ್ಟಾರ್ಟ್‌ಅಪ್ ಹಬ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಫೌಂಡೇಶನ್ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದರು.

ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಶನಿವಾರ ಆರಂಭಗೊಂಡಿರುವ ಶ್ರೀ ಬಿ.ಎಂ. ಪಾಟೀಲ ಫೌಂಡೇಶನ್ ಹ್ಯಾಖ್ ವ್ಯೆಹ್- 2025 ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಬಿ.ಎಂ. ಪಾಟೀಲ ಫೌಂಡೇಶನ್ ಫಾರ್ ಇನ್ನೋವೇಶಣ್ ಆಂಡ್ ಇನ್‌ಕ್ಯೂಬೇಶನ್ ಈಗಾಗಲೇ ನಾನಾ ಕಂಪನಿಗಳ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ದೇಶದ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗ ಒದಗಿಸಲು ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದರು.

ಇಂಥ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ನಾವಿನ್ಯತೆ ಮತ್ತು ತಂಡವಾಗಿ ಕೆಲಸ ಮಾಡುವುದರಿಂದ ಸಿಗುವ ಲಾಭ ಮತ್ತು ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಭವಿಷ್ಯದ ಯೋಜನೆಗಳ ಬಗ್ಗೆ ರೂಪು-ರೇಷೆ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬಿಎಲ್ಡಿಇ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಗುಣಮಟ್ಟದ ಶಿಕ್ಷಣ ಜೊತೆಗೆ ಸಂಸ್ಥೆ ಮತ್ತು ಉದ್ಯಮಗಳ ಮಧ್ಯ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅಷ್ಟೆ ಅಲ್ಲ, ವಿದ್ಯಾರ್ಥಿಗಳಿಗೆ ವೃತ್ತಿ ನೈಪುಣ್ಯತೆ ತರಬೇತಿ ನೀಡುವ ಮೂಲಕ ಆಧುನಿಕ ಅಗತ್ಯಗಳಿಗೆ ತಕ್ಕಂತೆ ಅವಕಾಶಗಳತ್ತ ಸಿದ್ದಪಡಿಸುತ್ತಿದೆ. ಈ ಕಾರ್ಯಕ್ರಮ ಕೇವಲ ಸ್ಪರ್ಧೆ ಮಾತ್ರವಲ್ಲ ಭವಿಷ್ಯವನ್ನು ಸಂಭ್ರಮಿಸುವ ಶುಭ ಗಳಿಗೆಯಾಗಿದೆ ಎಂದು ಅವರು ತಿಳಿಸಿದರು.

ಉನ್ನತ ಕೌಶಲ್ಯ, ಸ್ಟಾರ್ಟ್‌ಅಪ್ ಅಭಿವೃದ್ಧಿ, ತ್ವರಿತವಾಗಿ ಮಾದರಿಗಳ ತಯಾರಿಕೆ ಕುರಿತು ತರಬೇತಿ ನೀಡುವ ಮೂಲಕ ನವ ಉದ್ಯಮಿಗಳ ಕನಸು ನನಸಾಗಿಸುವ ಗುರಿ ಈ ಫೌಂಡೇಶನ್ ಹೊಂದಿದೆ. ಈ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳ ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಗುಣಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಬದ್ದವಾಗಿದೆ ಎಂದರು.

ಅಷ್ಟೇ ಅಲ್ಲ, ಬಿಎಲ್ಡಿಇ ಸಂಸ್ಥೆಯು ಎರಡು ಕಡೆ ಅಟಲ್ ಟಿಂಕರಿಂಗ್ ಲ್ಯಾಬ್ ಪ್ರಾರಂಭಿಸುವ ಮೂಲಕ ಐದನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಆಕರ್ಷಿಸಲು ಕ್ರಮ ಕೈಗೊಂಡಿದೆ. ಅಲ್ಲದೇ, ಬೇರೆ ಶಾಲೆಗಳ ವಿದ್ಯಾರ್ಥಿಗಳಿಗೆ ಲ್ಯಾಬ್‌ನಲ್ಲಿ ಕಾರ್ಯ ನಿರ್ವಹಿಸುವ ನುರಿತ ಶಿಕ್ಷಕರ ಮೂಲಕ ತರಬೇತಿ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಸ್ಪ್ರಿಂಗ್ ಅಪ್ ಲ್ಯಾಬ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಸಂತೋಷ ಕೊಟ್ನಿಸ್ ಮಾತನಾಡಿ, ಇಂಥ ಕಾರ್ಯಕ್ರಮಗಳು ಯುವಕರ ಸಣ್ಣ ಕನಸುಗಳನ್ನು ದೊಡ್ಡ ಯೋಜನೆಗಳಾಗಿ ಮಾರ್ಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಯುವಕರಿಗೆ ಹೊಸ ಅವಕಾಶಗಳತ್ತ ಮಾರ್ಗ ತೋರಿಸುತ್ತವೆ ಎಂದರು.

ಪ್ರಾಚಾರ್ಯ ಡಾ. ವಿ.ಜಿ ಸಂಗಮ ಮಾತನಾಡಿದರು. ಇನ್ನೋವಾಸ್ಕೇಪ್ ಸಂಸ್ಥಾಪಕ ಎಸ್. ಬದರಿ ನಾರಾಯಣ, ಕುಲಸಚಿವ ಡಾ. ಆರ್.ವಿ. ಕುಲಕರ್ಣಿ ಉಪಸ್ಥಿತರಿದ್ದರು. ಅಮೃತಾ ಹಿರೇಮಠ ಮತ್ತು ಸಂಘಡಿಗರು ಪ್ರಾರ್ಥಿಸಿದರು. ಡಾ. ಆಶಾ ಪಾಟೀಲ ಪರಿಚರಿಸಿದರು, ಡಾ. ವೈ.ಎ. ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net