

ಮುಂಡರಗಿ: ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುವ ಭರದಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯಜ್ಞಾನಕ್ಕೆ ಬಹಳಷ್ಟು ಮಹತ್ವವಿದೆ. ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಪ್ರಯತ್ನಶೀಲರಾಗಿ ಕಾರ್ಯನಿರ್ವಹಿಸಿದರೆ ಅಸಾಧ್ಯವೆಂಬುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇವಲ ಶಿಕ್ಷಕರಾಗುವ ಗುರಿ ಇಟ್ಟುಕೊಳ್ಳದೆ ಕೆಎಎಸ್ ಮತ್ತು ಐಎಎಸ್ ಪಾಸ್ ಮಾಡುವ ಗುರಿಯನ್ನು ಹೊಂದಿ ಯಶಸ್ವಿಯಾಗಬೇಕು ಎಂದರು.
ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಚನ ನೀಡಿ, ಶಿಕ್ಷಣ ಮಹಾವಿದ್ಯಾಲಯ ಎರಡು ವರ್ಷದಿಂದ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತಿದ್ದು ಖುಷಿ ತಂದಿದೆ. ಭಾವಿ ಶಿಕ್ಷಕರಾಗುವ ನೀವೆಲ್ಲ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಮುಖ್ಯಶಿಕ್ಷಕ ಡಾ.ನಿಂಗು ಸೊಲಗಿ ಮಾತನಾಡಿ, ಪ್ರಯತ್ನದಿಂದ ಸಾಧಿಸಲು ಸಾಧ್ಯ ಎನ್ನುವ ಛಲದೊಂದಿಗೆ ಜೀವನ ನಡೆಸಿದರೆ ಜೀವನ ಸಫಲವಾಗುತ್ತದೆ ಎಂದರು.
ಮೇಲ್ವಿಚಾರಣಾ ಸಮಿತಿ ಸದಸ್ಯ ನಾಗೇಶ ಹುಬ್ಬಳ್ಳಿ, ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿದರು. ಸಿ.ಎಸ್.ಅರಸನಾಳ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾನ್ವಿತ ಪ್ರಶಿಕ್ಷಣಾರ್ಥಿಗಳಾದ ನಿಂಗರಾಜ ಮೇಟಿ ಮತ್ತು ಮಹಾದೇವ ಸಿಂಪಿಗೇರ ಅವರನ್ನು ಸನ್ಮಾನಿಸಲಾಯಿತು. ಅಜ್ಜಪ್ಪ ಲಿಂಬಿಕಾಯಿ, ಎಸ್.ಕೆ.ಹೊಳೆಯಣ್ಣವರ, ಶ್ರೀಕಾಂತ ಎಂ.ಎಲ್, ಕೃಷ್ಣಾ ಬೇಲೇರಿ, ಮತ್ತುರಮಠ, ಶ್ವೇತಾ ಬೆಲ್ಲದ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಎಂ.ವಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ. ಹಂಚಿನಾಳ ವಾರ್ಷಿಕ ವರದಿ ವಾಚಿಸಿದರು. ರಾಜಶೇಖರ ಹುಲ್ಯಾಳ ನಿರೂಪಿಸಿದರು.