ನವೋದ್ಯಮಿಗಳಿಗೆ ಡಿಆರ್‌ಡಿಒ ಮಣೆ

drdo prize
Published on

ಬೆಂಗಳೂರು: ಜಾಗತಿಕ ರಕ್ಷಣಾ ಕ್ಷೇತ್ರದಲ್ಲಿ ಭಾರತವು ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನವೋದ್ಯಮಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಹೊಸ ಆವಿಷ್ಕಾರ, ತಂತ್ರಜ್ಞಾನಗಳ ಪ್ರಾಜೆಕ್ಟ್‌ಗಳ ಕನಸನ್ನು ನನಸು ಮಾಡಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಸಂಸ್ಥೆಯ ತಾಂತ್ರಿಕ ವಿಭಾಗದ ಮಹಾನಿರ್ದೇಶಕ ಬಿ.ಕೆ.ದಾಸ್ ತಿಳಿಸಿದರು.

ಏರೋ ಇಂಡಿಯಾ ನೇಪಥ್ಯದಲ್ಲಿ ಹಮ್ಮಿಕೊಂಡಿದ್ದ ‘ಡಿಫೆನ್ಸ್ ಇನ್ನೋವೇಷನ್ ಚಾಲೆಂಜ್ ಎಕ್ಸಿಲೆನ್ಸ್ -2024’ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದರು.

ಭಾರತವು ಹಿಂದಿಗಿಂತ ಈಗ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ನಮ್ಮ ರಕ್ಷಣಾ ಸಾಮಗ್ರಿಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಬೇಕಿದೆ. ಇದಕ್ಕಾಗಿ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಡಿಆರ್‌ಡಿಒ ಸಕ್ರಿಯವಾಗಿದೆ. ಹೊಸ ಪೀಳಿಗೆಯ ತಂತ್ರಜ್ಞಾನದ ಮೂಲಕ ರಕ್ಷಣಾ ಸಾಮಗ್ರಿಗಳನ್ನು ತಯಾರಿಸಬೇಕಿದ್ದು, 300ಕ್ಕೂ ಹೆಚ್ಚಿನ ಟೆಕ್ನಾಲಜಿ ಮೂಲಕ ಸೇನಾ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಈ ಕಾರ್ಯದಲ್ಲಿ ಕೈಜೋಡಿಸಲು ದೇಶದಲ್ಲಿರುವ 2 ಲಕ್ಷಕ್ಕೂ ಅಧಿಕ ನವೋದ್ಯಮಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಂಕಲ್ಪ ತೊಡಬೇಕಿದೆ ಎಂದರು.

ಡಿಆರ್‌ಡಿಒ ಗೇಮ್ ಚೇಂಜರ್ ನಾಯಕನಾಗುವತ್ತ ದೃಷ್ಟಿ ಹರಿಸಿದೆ. ಇದರ ಮೂಲಕ ಹೊಸ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಅವಕಾಶಗಳಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯುವಜನತೆ ದೇಶಕ್ಕಾಗಿ ಕೆಲಸ ಮಾಡುವ ಛಲಹೊತ್ತು ನವೋದ್ಯಮಕ್ಕೆ ಕಾಲಿಟ್ಟು ಯಶಸ್ಸು ಪಡೆಯಲು ಮುಂದಾಗಬೇಕು ಎಂದು ಬಿ.ಕೆ.ದಾಸ್ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net