

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ಮಗುವೂ ವಿಭಿನ್ನ ಶೈಲಿಗಳಲ್ಲಿ ತನ್ನ ಮನದಾಳದ ಕಲ್ಪನೆಗಳಿಗೆ ಅನುಸಾರವಾಗಿ ಗೀಚುವುದರಲ್ಲೇ ಆನಂದ ಅನುಭವಿಸುತ್ತದೆ. ನಂತರ ಶಾಲಾ ಕಲಿಕೆಯಲ್ಲಿ ಶಿಕ್ಷಕರು ಚಿತ್ರಗಳ ಮೂಲಕವೇ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹೀಗಾಗಿ ಮಕ್ಕಳ ಅಧ್ಯಯನ ಭಾಷೆಯೇ ಚಿತ್ರಕಲೆಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ವತಿಯಿಂದ ಇಲ್ಲಿನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆ ವಿದ್ಯಾರ್ಥಿಗಳು ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಭಾವನೆಗಳ ಅಭಿವ್ಯಕ್ತಿಯ ಕಲ್ಪನಾಶಕ್ತಿ ಅಧಿಕಗೊಳ್ಳಲು ನೆರವಾಗುತ್ತದೆ. ಪ್ರಸ್ತುತ ಶೈಕ್ಷಣಿಕ ಬಲವರ್ಧನೆ ವರ್ಷದ ಅಂಗವಾಗಿ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಎಂಬ ಪ್ರಧಾನ ಆಶಯದ ಅಡಿ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ವಿಕಾಸದ ಪರಿಕಲ್ಪನೆಗಳೊಂದಿಗೆ 50 ಜನ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರು ವಿಶಿಷ್ಟ ಕಲಾಕೃತಿಗಳನ್ನು ಸಿದ್ಧಪಡಿಸಲಿದ್ದಾರೆ ಎಂದರು.
ಈಶ್ವರ ನಾಯಕ ಮಾತನಾಡಿ, ಮಕ್ಕಳ ಚಿತ್ರಗಳಲ್ಲಿ ಒಂದು ಶಕ್ತಿ ಇದೆ. ಕಾರಣ ಮಕ್ಕಳ ಚಿತ್ರಕಲೆ ಶುದ್ಧವಾದ ಕಲೆ. ಹೀಗಾಗಿ ಮಕ್ಕಳ ಚಿತ್ರಗಳು ಅಮೂಲ್ಯವಾದವು. ಅವರು ತಮ್ಮದೇ ಆದ ಕಲ್ಪನೆಯಿಂದಲೇ ಚಿತ್ರಿಸುತ್ತಾರೆ. ಅವರ ಚಿತ್ರಗಳೆಂದರೆ ಅನುಭವ ಪರಂಪರೆಯ ಅಭಿವ್ಯಕ್ತಿಯಾಗಿದೆ ಎಂದರು.
ಸಂಜೀವ ಬಿಂಗೇರಿ, ಡಾ. ಬಸವರಾಜ ಕುರಿಯವರ, ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಎಸ್.ಎ. ಕೇಸರಿ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚಲವಾದಿ, ವಿಜಯಕುಮಾರ ಶಿಂಗೆ, ಹೇಮಂತ ಲಮಾಣಿ, ಇತರರು ಇದ್ದರು.
ಪ್ರವಿಣ ಬಿರಾದಾರ ಸ್ವಾಗತಿಸಿದರು. ಬಿ.ವೈ.ಭಜಂತ್ರಿ ವಂದಿಸಿದರು.