ಚಿಣ್ಣರ ಕಲ್ಪನೆಯಲ್ಲಿ ಅರಳಿದ ಪರಿಸರ

srawing compitation in koppal by vijayavani and niveditha english medium school
ಕೊಪ್ಪಳದ ನಿವೇದಿತಾ ಶಾಲೆಯಲ್ಲಿ ವಿಜಯವಾಣಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ನೀಡಿದರು. ಡಿಎಚ್​ಒ ಡಾ.ಟಿ.ಲಿಂಗರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ನಿವೇದಿತಾ ಶಾಲೆ ಮುಖ್ಯಸ್ಥೆ ಶಾರದಾ ಪುಲಸ್ಕರ್​, ಶಿವಶಾಂತವೀರ ಶಾಲೆ ಮುಖ್ಯಸ್ಥ ಶಿವಕುಮಾರ ಕುಕನೂರು, ಚಿತ್ರಕಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಸುನಗಾ, ನಿತೀಶ ಪುಲಸ್ಕರ್​ ಇದ್ದರು.
Published on
  • ನೂರಾರು ಮಕ್ಕಳು ಭಾಗಿ
  • ವಿಜೇತರಿಗೆ ನಗದು ಬಹುಮಾನ

ಕೊಪ್ಪಳ: ವಿಶ್ವ ಪರಿಸರ ದಿನ ಅಂಗವಾಗಿ ಕನ್ನಡದ ನಂ.1 ದಿನ ಪತ್ರಿಕೆ ವಿಜಯವಾಣಿ ಹಾಗೂ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮಕ್ಕೆ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು. ತಮ್ಮದೇ ಕಲ್ಪನೆಯ ಪರಿಸರದ ಚಿತ್ರ ರಚಿಸಿ ಬಗೆ ಬಗೆ ಬಣ್ಣ ತುಂಬಿದರು. ನಿರ್ಣಾಯಕರು ವಿಜೇತರ ಆಯ್ಕೆಗೆ ಕಸರತ್ತು ನಡೆಸುವಂತಾಯಿತು.

ಬೆಳಗ್ಗೆಯೇ ಆರಂಭವಾದ ಸ್ಪರ್ಧೆಗೆ ನಗರ ಸೇರಿ ತಾಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ನೋಂದಣಿ ಮಾಡಿಸಿಕೊಂಡರು. ಒಂದು ಗಂಟೆ ಅವಧಿಯಲ್ಲಿ ತಮ್ಮ ಕಲ್ಪನಾ ಲೋಕದ ಪರಿಸರವನ್ನು ಚಿತ್ರಿಸಿದರು. ರಾಷ್ಟ್ರಮಟ್ಟದ ಚಿತ್ರ ಕಲಾವಿದ ರಾಜು ತೇರದಾಳ ಹಾಗೂ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂದ ಅಧ್ಯಕ್ಷ ನಾಗರಾಜ ಸುನಗಾ ಹಲವು ಸುತ್ತುಗಳ ಕಸರತ್ತು ನಡೆಸಿ ಅಂತಿಮ ಮೂವರು ವಿಜೇತರು ಹಾಗೂ ನಾಲ್ವರನ್ನು ಸಮಾಧಾನಕರ ಬಹುಮಾನಕ್ಕೆ ಆಯ್ಕೆ ಮಾಡಿದರು. ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾಗಿ ಚಿತ್ರ ರಚಿಸಿದ್ದು, ರ್ನಿಣಯ ಕೈಗೊಳ್ಳುವುದು ನಿರ್ಣಾಯಕರಿಗೆ ಕಷ್ಟವಾಯಿತು. ಅಂತಿಮವಾಗಿ ಚರ್ಚಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಡಿಎಚ್​ಒ ಡಾ.ಟಿ.ಲಿಂಗರಾಜು ಮಾತನಾಡಿ, ಪರಿಸರ ಇದ್ದರೆ ನಾವು. ವಿಜಯವಾಣಿ ಪತ್ರಿಕೆಯವರು ಕೇವಲ ಸುದ್ದಿ ನೀಡುವುದಲ್ಲದೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಶ್ಲಾನೀಯ. ಕೇವಲ ಮಕ್ಕಳಿಗೆ ಅಷ್ಟೇ ಅಲ್ಲದೆ, ಮಹಿಳೆ ಸೇರಿ ಇತರ ವರ್ಗದ ಜನರಿಗೂ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದನ್ನು ಕಂಡಿದ್ದೇನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರು. ಸ್ಪರ್ಧೆ ಕಾರಣಕ್ಕೆ ಕೆಲವರಿಗೆ ಪ್ರಶಸ್ತಿ ಸಿಗಬಹುದು. ನೀವೆಲ್ಲ ದೇಶದ ಭವಿಷ್ಯ. ಮುಂದೆ ಯಾರು ಯಾವ ಅಧಿಕಾರಿ, ವಿಜ್ಞಾನಿ, ಕಲಾವಿದ ಅಥವಾ ಏನಾಗುವಿರಿ ಎಂದು ಈಗಲೇ ಊಹಿಸುವುದು ಕಷ್ಟ. ನಿಮ್ಮ ಪ್ರತಿಭೆ ನಿಮ್ಮನ್ನು ಬೆಳೆಸುತ್ತದೆ ಎಂದರು.

ನಿವೇದಿತಾ ಶಾಲೆ ಶಾರದಾ ಪುಲಸ್ಕರ್​ ಮಾತನಾಡಿ, ಪರಿಸರ ನಮಗೆಲ್ಲ ನೀಡಿದೆ. ಅದರಿಂದಲೇ ನಾವು ಜೀವನ ನಡೆಸುತ್ತಿದ್ದೇವೆ. ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು. ನಮ್ಮ ಶಾಲೆಯಲ್ಲೂ ನಿರಂತರವಾಗಿ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದೇವೆ. ವಿಜಯವಾಣಿ ಬಳಗದಿಂದ ಸ್ಪರ್ಧೆ ಏರ್ಪಡಿಸಿದ್ದು ಉತ್ತಮ ಕೆಲಸ ಎಂದು ಪ್ರಶಂಸಿದರು.

ನಿರ್ಣಾಯಕ ರಾಜು ತೇರದಾಳ ಮಾತನಾಡಿ, ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್​ ಗೀಳಿಗೆ ಬಿದ್ದಿದ್ದಾರೆ. ಅದರಿಂದ ಹೊರ ಬರಲು ಇಂಥ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಇದಕ್ಕೆ ಅವಕಾಶ ಕಲ್ಪಿಸಿದ ವಿಜಯವಾಣಿ ತಂಡ ಹಾಗೂ ಶಾಲೆ ಆಡಳಿತ ಮಂಡಳಿ ಇತರರಿಗೆ ಮಾದರಿಯಾಗಿವೆ. ತಾಲೂಕು ಮಟ್ಟದಲ್ಲೂ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅಲ್ಲಿನ ಮಕ್ಕಳ ಪ್ರತಿಭೆಗೂ ಸಹಕಾರ ನೀಡುವ ಕೆಲಸವಾಗಲಿ ಎಂದು ಆಶಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಶಿವಶಾಂತವೀರ ಶಾಲೆ ಮುಖ್ಯಸ್ಥ ಶಿವಕುಮಾರ ಕುಕನೂರು, ಚಿತ್ರಕಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಸುನಗಾ, ನಿತೀಶ ಪುಲಸ್ಕರ್​, ಹುಲುಗಪ್ಪ ಕಟ್ಟಿಮನಿ, ವಿಜಯವಾಣಿ ಜಿಲ್ಲಾ ವರದಿಗಾರ ರವೀಂದ್ರ ವಿ.ಕೆ., ಪ್ರಸರಣ ಪ್ರತಿನಿಧಿ ಕೊಪ್ರೇಶ ಜೋಶಿ, ಛಾಯಾಗ್ರಾಹಕ ನಾಭಿರಾಜ ದಸ್ತೇನವರ, ವಿವಿಧ ಶಾಲೆ ಶಿಕ್ಷಕರು, ಸಿಬ್ಬಂದಿ ಇದ್ದರು.

ವಿಜೇತರು
ನಿವೇದಿತಾ ಶಾಲೆಯ 8ನೇ ತರಗತಿ ಅಮನ್​ ಖಾನ್​&ಪ್ರಥಮ (3 ಸಾವಿರ ರೂ.), 8ನೇ ತರಗತಿಸಂಜನಾ ಎಲಿಗಾರ&ದ್ವೀತಿಯ(2 ಸಾವಿರ ರೂ.) ಶ್ರೀ ರಾಜರಾಜೇಶ್ವರಿ ಶಾಲೆ ಹಲಗೇರಿ 10ನೇ ತರಗತಿಯ ಸೃಷ್ಠಿ ಪೊ.ಪಾ&ತೃತೀಯ (1 ಸಾವಿರ ರೂ.), 6ನೇ ತರಗತಿಯ ಅನ್ವಿ, ಗವೀಶ ಎಸ್​.ವಿ, 8ನೇ ತರಗತಿಯ ನೀತಿನ್​ ಕುಮಾರ್​, 9ನೇ ತರಗತಿಯ ಸಿದ್ಧಾರ್ಥ ಜಾಧವ್​ಗೆ ಸಮಾಧಾನಕರ ಬಹುಮಾನ (ತಲಾ 500 ರೂ.ನಗದು) ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.

ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ವಿಜಯವಾಣಿ ಪತ್ರಿಕೆವತಿಯಿಂದ ನಮ್ಮ ಶಾಲೆಯಲ್ಲಿ ಪರಿಸರದ ಬಗ್ಗೆ ಚಿತ್ರ ಬಿಡುಸುವ ಸ್ಪರ್ಧೆ ಇದೆ ಎಂದು ತಿಳಿದು ಖುಷಿಯಾಯಿತು. ಸಾಮಾನ್ಯವಾಗಿ ಭಾಗಿಯಾಗಿ ಚಿತ್ರ ಬಿಡಿಸಿರುವೆ. ನನಗೆ ಮೊದಲ ಬಹುಮಾನ ಬಂದಿದ್ದು ಖುಷಿ ಎನಿಸಿದೆ. ವಿಜಯವಾಣಿ ಬಳಗಕ್ಕೆ ಧನ್ಯವಾದಗಳು. ಅಮನ್​ ಖಾನ್​. ಪ್ರಥಮ ಬಹುಮಾನ ವಿಜೇತ ವಿದ್ಯಾರ್ಥಿ.

ಅಮನ್​ ಖಾನ್​. ಪ್ರಥಮ ಬಹುಮಾನ ವಿಜೇತ ವಿದ್ಯಾರ್ಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net