

ಕಾರವಾರ: ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯಾಣಿ ಪರಿಸರ ದಿನಾಚರಣೆಯ ಅಂಗವಾಗಿ ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕಾರವಾರ ತಾಲೂಕಿನ ಹೈಸ್ಕೂಲ್‌ಗಳಿಂದ ಮಾತ್ರವಲ್ಲದೇ ಕುಮಟಾ, ಅಂಕೋಲಾ ಭಾಗದಿಂದಲೂ ಹೈಸ್ಕೂಲ್ ವಿದ್ಯಾರ್ಥಿಗಳು ಆಗಮಿಸಿ ಚಿತ್ರ ಬಿಡಿಸಿದರು.
ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗ, ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ಜಾಗತಿಕ ತಾಪಮಾನ ವಿಷಯವಾಗಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗಳಿಂದ ಹಾಗೂ ಇತರ ಮಾಲಿನ್ಯಗಳಿಂದ ಭೂಮಿ ಹೇಗೆ ಕಲುಶಿತವಾಗುತ್ತಿದೆ ಎಂಬ ತಮ್ಮ ಕಲ್ಪನೆಯನ್ನು ಕುಂಚದಲ್ಲಿ ಕಟ್ಟಿಕೊಟ್ಟರು.
135 ಕ್ಕೂ ಅಧಿಕ ವಿದ್ಯಾರ್ಥಿಗಳು ವಿಭಿನ್ನ ಶೈಲಿಯ ಚಿತ್ರಗಳನ್ನು ಬಿಡಿಸಿ ಮೆಚ್ಚುಗೆಗೆ ಪಾತ್ರವಾದರು. ಚಿತ್ರಗಳು ಒಂದಕ್ಕಿಂತ ಒಂದು ಉತ್ತಮವಾಗಿದ್ದು, ಜಾಗತಿಕ ತಾಪಮಾನದ ಸಂದೇಶವನ್ನು ನೀಡುವಂತಿದ್ದವು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಗಿಡ, ಮರ ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಜವಾಬ್ದಾರಿಯಲ್ಲ. ಮುಂದಿನ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಕರೆ ನೀಡಿದರು.
ವಿಜಯವಾಣಿ ದಿನಪತ್ರಿಕೆಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಬುಧವಾರ ಆಯೋಜಿಸಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ನಮ್ಮ ಪರಿಸರ ಸುಸ್ಥಿರವಾಗಿರಬೇಕಾದರೆ ಶೇ. 43 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಅರಣ್ಯದ ಪ್ರಮಾಣ ಕಡಿಮೆಯಾದ ಕಾರಣ ಜಾಗತಿಕ ತಾಪಮಾನ ಹೆಚ್ಚಿದೆ. ಬಿಸಿ ಗಾಳಿ ಬೀಸುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ರಾಜ್ಯದ ಈ ಬಾರಿ ಬಿಸಿ ಗಾಳಿಯಿಂದ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಈ ಪರಿಸ್ಥಿತಿ ಮುಂದಿನ ದಿನದಲ್ಲಿ ಇನ್ನಷ್ಟು ಭೀಕರವಾಗಲಿದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಗಿಡ ನೆಡಬೇಕು. ಇಂದು ನೆಟ್ಟು ಫೋಟೋ ಹೊಡೆಸಿಕೊಂಡು ಬಿಡುವುದಲ್ಲ. ಗಿಡಗಳನ್ನು ಪೋಶಿಸಬೇಕು ಎಂದು ಕರೆ ನೀಡಿದರು.
ನೀರನ್ನು ಮಿತವಾಗಿ ಬಳಸಿ
ನೀರನ್ನು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ ಅದನ್ನು ಸದ್ಬಳಕೆ ಮಾಡಿ ಎಂದು ಸೇಂಟ್ ಮಿಸಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಾರ್ಜಾ ಫರ್ನಾಂಡಿಸ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರ ಗಿಡ ಬೆಳೆಸಲು ನೀರು ಬೇಕು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ. ಕ್ರೀಡೆಯಲ್ಲಿ ಪಾಳ್ಗೊಂಡು ದೇಹವನ್ನು ಸದೃಢವಾಗಿಟ್ಟುಕೊಳ್ಳಿ, ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರ ಬಿಡಿಸುವುದು ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಹೀಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಬಿಇಒ ಕಚೇರಿಯ ಬಿಆರ್‌ಪಿ ಪ್ರಶಾಂತ ಸಾವಂತ ಮಾತನಾಡಿ, ಪರಿಸರ ಉಳಿದರೆ ನಾವೆಲ್ಲ ಉಳಿಯುತ್ತೇವೆ. ಪರಿಸರದ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಕಾಳಜಿ ಬೆಳೆಸಿಕೊಳ್ಳಬೇಕು. ವಿಜಯವಾಣಿ ಪತ್ರಿಕೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.
ನಿರ್ಣಾಯಕರ ಪರವಾಗಿ ಮಾತನಾಡಿದ ಆನಂದು ಘಟಕಾಂಬಳೆ ಅವರು ಪ್ರತಿಯೊಬ್ಬರೂ ಪ್ರತಿ ವರ್ಷ ಹುಟ್ಟು ಹಬ್ಬ ಆಚರಣೆ ಮಾಡುವಂತೆ ಪ್ರತಿ ವರ್ಷ ಒಂದೊಂದು ಸಸಿಯನ್ನು ನೆಡಿ ಎಂದರು. ವಿದ್ಯಾರ್ಥಿಗಳು ಅತ್ಯುತ್ತಮ ಚಿತ್ರಗಳನ್ನು ಬಿಡಿಸಿದ್ದರು. ನಾವು ಆಯ್ಕೆ ಮಾಡುವುದು ಕಠಿಣವಾಯಿತು. ವಿಷಯಕ್ಕೆ, ರೇಖೆಗಳಿಗೆ ಹಾಗೂ ಬಣ್ಣಕ್ಕೆ ನಾವು ಮಹತ್ವ ನೀಡಿದ್ದೇವೆ. ಮೊದಲು 10 ಅತ್ಯುತ್ತಮ ಚಿತ್ರಗಳನ್ನು ಆಯ್ದುಕೊಂಡು ನಂತರ ಅದರಲ್ಲಿ 5 ಬಹುಮಾನ ವಿಜೇತರನ್ನು ಆಯ್ದುಕೊಂಡಿದ್ದೇವೆ ಎಂದರು.
ಕಾರವಾರ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಭೂಮಿ ರೇವಣಕರ್ ಪ್ರಥಮ ಸ್ಥಾನ ಪಡೆದು 3 ಸಾವಿರ ರೂ. ನಗದು, ಕಾರವಾರ ಕೈಗಾ ಅಣುಶಕ್ತಿ ಕೇಂದ್ರೀಯ ವಿದ್ಯಾಲಯದ ಅಕ್ಷರಾ ಪಿ.ಕಾಮತ್ ದ್ವಿತೀಯ ಸ್ಥಾನ ಪಡೆದು 2 ಸಾವಿರ ರೂ. ನಗದು, ಕುಮಟಾ ಸಿವಿಎಸ್‌ಕೆ ಹೈಸ್ಕೂಲ್‌ನ ಪದ್ಮಾ ಎಚ್.ನಾಯಕ ತೃತೀಯ ಸ್ಥಾನ ಪಡೆದು 1 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರಗಳನ್ನು ಪಡೆದರು. ಕಾರವಾರ ಸುಂಕೇರಿ ನಿರ್ಮಲಾ ರಾಣಿ ಹೈಸ್ಕೂಲ್‌ನ ರಾಜೀವ ಆರ್.ರಾಯ್ಕರ್ ಹಾಗೂ ಸೇಂಟ್ ಮೈಕಲ್ ಸ್ಕೂಲ್‌ನ ಡೆಲ್ಕೋ ಡಿ.ಫರ್ನಾಂಡಿಸ್ ಸಮಾಧಾನಕರ ಬಹುಮಾನ ಹಾಗೂ ತಲಾ 500 ರೂ. ನಗದು ಪಡೆದುಕೊಂಡರು. ನಿವೃತ್ತ ಚಿತ್ರಕಲಾ ಶಿಕ್ಷಕರಾದ ಅನಿಲ್ ಮಡಿವಾಳ ಹಾಗೂ ಆನಂದು ಘಟಕಾಂಬಳೆ ಅವರು ನಿರ್ಣಾಯಕರಾಗಿ ಆಗಮಿಸಿದ್ದರು. ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ನಗದು ಬಹುಮಾನಗಳನ್ನು ಪ್ರಾಯೋಜಿಸಿತ್ತು.
ವಿಜಯವಾಣಿ ಪತ್ರಿಕೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಆರೋಗ್ಯ, ಪರಿಸರ ಮುಂತಾದ ಹಲವು ವಿಚಾರಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ ಪತ್ರಿಕೆಗೆ ಅಭಿನಂದನೆಗಳು.ಜಾರ್ಜ್ ಫರ್ನಾಂಡಿಸ್ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಜಯವಾಣಿ ಪತ್ರಿಕೆ ಹೊರ ತರುತ್ತಿರುವ ವಿದ್ಯಾರ್ಥಿ ಮಿತ್ರ ಸಂಚಿಕೆ ವಿದ್ಯಾರ್ಥಿಗಳಿಗೆ, ಉದ್ಯೋಗ ಅರಸುತ್ತಿರುವವರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವವರಿಗೆ ಬಹಳ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು.ಮಂಜುನಾಥ ನಾವಿಡಿಎಫ್‌ಒ, ಸಾಮಾಜಿಕ ಅರಣ್ಯ ವಿಭಾಗ