ಸನಾತನ ಸಂಸ್ಕೃತಿ ಪುನರುತ್ಥಾನಗೊಳ್ಳಲಿ: ಲಲಿತಕಲಾ ಅಕಾಡೆಮಿ ಸದಸ್ಯ ಎಚ್.ಎ.ಆತ್ಮಾನಂದ ಹೇಳಿಕೆ

05_12_Mdy_02(Drawing)
Published on

ಮಂಡ್ಯ: ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರದಲ್ಲಿ ನಶಿಸುವ ಹಂತಕ್ಕೆ ಬರುತ್ತಿರುವ ಸನಾತನ ಸಂಸ್ಕೃತಿಯನ್ನು ಮತ್ತೆ ಪುನರುತ್ಥಾನಗೊಳಿಸುವ ಅಗತ್ಯತೆ ಇದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಎಚ್.ಎ.ಆತ್ಮಾನಂದ ಅಭಿಪ್ರಾಯಿಸಿದರು.

ನಗರದ ಗಾಂಧಿಭವನದಲ್ಲಿ ಕಲಾತಪಸ್ವಿ ಟ್ರಸ್ಟ್ ಹಾಗೂ ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಚಿತ್ರಕಲೆ ಮತ್ತು ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸನಾತನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಪ್ರೇರಣೆ ಮಾಡಬೇಕು ಎಂದು ಹೇಳಿದರು.

ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಮಕ್ಕಳೂ ಸಹ ಮುಂದಾಗಬೇಕು. ಅವರಿಗೆ ಪ್ರೋತ್ಸಾಹ ನೀಡಬೇಕು. ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳೂ ಅಳವಡಿಸಿಕೊಳ್ಳುತ್ತಿವೆ. ಆದರೆ ನಾವು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯಕ್ಕೆ ತಲೆದೂಗುತ್ತಿದ್ದೇವೆ. ಇದು ದುರಂತದ ಸಂಗತಿ ಎಂದು ವಿಷಾದಿಸಿದ ಅವರು, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಯಾವುದೇ ಸಂಘ ಸಂಸ್ಥೆಗಳು ಮುಂದಾದರೂ ಅಂತಹ ಸಂಸ್ಥೆಗಳಿಗೆ ಸಹಕಾರ ನೀಡಬೇಕು. ನಾವೂ ಸಹ ಕೈ ಜೋಡಿಸಿ ನಮ್ಮ ಮಕ್ಕಳು ಅದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಕೆ.ಎಂ.ಮಹೇಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿದಾಗ ಮಾತ್ರ ಅವರಲ್ಲಿ ಕ್ರಿಯಾಶೀಲತೆ ಮೂಡಲು ಸಾಧ್ಯ. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ, ವೇಷಭೂಷಣ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಒಂದಷ್ಟು ಸಂಸ್ಥೆಗಳು ಇದನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ. ಅಂತಹ ಸಂಸ್ಥೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಚಿತ್ರಕಲೆಯಲ್ಲಿ ಆಸಕ್ತಿ ಇರುವ ಮಕ್ಕಳನ್ನು ಗುರುತಿಸಲು ಇದು ಸಹಕಾರಿಯಾಗುತ್ತದೆ. ಅವರಲ್ಲಿ ನಾನಾ ರೀತಿಯ ಗೊಂದಲಗಳು ಇರುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಮಾತ್ರ ಹಲವು ಗೊಂದಲಗಳು ನಿವಾರಣೆಯಾಗುತ್ತದೆ. ಚಿತ್ರಕಲೆ ಸೇರಿದಂತೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮುನ್ನ ತರಬೇತಿಯೂ ಮುಖ್ಯ. ಇಂತಹ ಕಾರ್ಯಕ್ರಮಗಳಿಂದಾಗಿ ಎಲ್ಲಿ ತರಬೇತಿ ನೀಡಲಾಗುತ್ತದೆ. ನಾವು ಯಾವ ಸಂಸ್ಥೆಯಲ್ಲಿ ತರಬೇತಿ ಪಡೆಯಬೇಕು ಎಂಬ ನಿಖರ ಮಾಹಿತಿಯನ್ನೂ ಪಡೆಯಬಹುದಾಗಿದೆ ಎಂದು ಹೇಳಿದರು.

ಟ್ರಸ್ಟ್‌ನ ಖಜಾಂಚಿ ಎಂ.ಸಿ.ಲಾವಣ್ಯ, ಕಾರ್ಯದರ್ಶಿ ಅನಿಲ್‌ಕುಮಾರ್, ಎ.ಎಸ್.ದಿವ್ಯಾನಂದ, ಉಲ್ಲಾಸ್‌ಗೌಡ, ಎಂ.ಶಿವಪ್ರಸಾದ್ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net