ನಕಲಿ ಖಾತೆ ತೆರೆದು 12.6 ಲಕ್ಷ ರೂ. ಡ್ರಾ; ಬಾಗಲೂರು ಪಿಡಿಒ ಹೆಸರಲ್ಲಿ ಖಾತೆ

MONEY
Published on

ಬೆಂಗಳೂರು: ಸಂಜಯನಗರದಲ್ಲಿರುವ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೆಸರಿನಲ್ಲಿ ನಕಲಿ ಖಾತೆ ತೆರೆದ ಅಪರಿಚಿತರು 12.6 ಲಕ್ಷ ರೂ. ವಂಚಿಸಿದ್ದಾರೆ. ಈ ಬಗ್ಗೆ ಬಾಗಲೂರು ಗ್ರಾಮ ಪಂಚಾಯತಿ ಪಿಡಿಒ ಅನ್ನಪೂರ್ಣೆಶ್ವರಿ ದೂರು ನೀಡಿದ್ದು, ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಮೂಲಕ ಒಎಫ್​ಸಿ ಕೇಬಲ್ ಅಳವಡಿಸಲು ಪರವಾನಗಿ ಪಡೆಯಲು ಜಿಯೊ ಡಿಜಿಟಲ್ ಪ್ರೖೆ. ಕಂಪನಿಯ ಗುತ್ತಿಗೆದಾರ ಆನಂದ್ ಅರ್ಜಿ ಸಲ್ಲಿಸಿದ್ದರು. ಅನುಮತಿ ನೀಡಲು 12.6 ಲಕ್ಷ ರೂ. ತೆರಿಗೆ ಪಾವತಿಸುವಂತೆ ಆನಂದ್​ಗೆ ಪಿಡಿಒ ಸೂಚಿಸಿದ್ದರು. ಆದರೆ, ಹಣ ಪಾವತಿಸದ ಕಾರಣ ಅವರಿಗೆ ಅನುಮತಿ ನೀಡಿರಲಿಲ್ಲ.

ನಕಲಿ ಖಾತೆ ತೆರೆದು ಹಣ ಲಪಟಾಯಿಸಿದರು: ಅನುಮತಿ ಸಿಗದಿದ್ದರೂ ಕೇಬಲ್ ಅಳವಡಿಸುವ ಕೆಲಸವನ್ನು ಆನಂದ್ ಆರಂಭಿಸಿದ್ದರು. ಇದು ಪಿಡಿಒ ಗಮನಕ್ಕೆ ಬಂದು ವಿಚಾರಿಸಿದಾಗ, ಗ್ರಾಪಂ ಅಧ್ಯಕ್ಷ ಜೆ. ಮುನೇಗೌಡ ಅವರಿಗೆ ಡಿಡಿ (ಡಿಮಾಂಡ್ ಡ್ರಾಫ್ಟ್) ನೀಡಿರುವುದಾಗಿ ಆನಂದ್ ವಿವರಿಸಿದ್ದರು. ಮುನೇಗೌಡ ಅವರನ್ನು ವಿಚಾರಿಸಿದಾಗ ಮೊದಲು ಕೊಟ್ಟಿದ್ದಾರೆ ಎಂದಿದ್ದ ಅವರು ಬಳಿಕ ಕೊಟ್ಟಿಲ್ಲ ಎಂದು ಹೇಳಿದ್ದರು.

ತೆರಿಗೆ ಪಾವತಿಸಿದ್ದ ಡಿಡಿ ಫೋಟೊ ತೆಗೆದು ವಾಟ್ಸ್​ಆಪ್ ಮೂಲಕ ಪಿಡಿಒಗೆ ಆನಂದ್ ಅವರು, ಕಳುಹಿಸಿದ್ದರು. ಡಿಡಿ ಬಗ್ಗೆ ಪರಿಶೀಲಿಸಿದಾಗ ಸಂಜಯ ನಗರದಲ್ಲಿರುವ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಾಗಲೂರು ಹೆಸರಿನ ಖಾತೆಗೆ ಹಣ ಜಮೆ ಆಗಿರುವುದು ಬೆಳಕಿಗೆ ಬಂದಿತ್ತು. ಆದರೆ, ಆ ಬ್ಯಾಂಕ್​ನಲ್ಲಿ ಬಾಗಲೂರು

ಗ್ರಾಮ ಪಂಚಾಯಿತಿಯ ಯಾವುದೇ ಖಾತೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನಕಲಿ ಖಾತೆ ತೆರೆದು ಹಣ ಲಪಟಾಯಿಸಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net