

ಶಿರಾ: ಜಗತ್ತಿನ ಮಾರ್ಗದರ್ಶಕ ಸಂಸತಿ ಹರಪ್ಪ ಸಂಸತಿ, ಅದರ ಮೂಲ ಪುರುಷ ಹರ, ಎಲ್ಲ ಧರ್ಮಗಳಿಗೂ ಆಶ್ರಯ ನೀಡಿದ್ದು ಶ್ರೀಶೈಲ. ಆರ್ಯ ಮತ್ತು ದ್ರಾವಿಡ ಸಂಸತಿ ಸೇರಿ ಹಿಂದು ಧರ್ಮವಾಯಿತು. ಆರ್ಯರು ಅಗ್ನಿ ಆರಾಧಕರು, ದ್ರಾವಿಡರು ಜಲ ಆರಾಧಕರು. ಆದ್ದರಿಂದ ದ್ರಾವಿಡ ಸಂಸತಿಯವರು ಯಜ್ಞ ಯಾಗಾದಿಗಳನ್ನು ಮಾಡಬಾರದು ಎಂದು ನಿಡುಮಾಮಿಡಿ ಜಗದ್ಗುರು ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಕಾಳಿಂಗಯ್ಯನ ಮಠದ 350ನೇ ವಾರ್ಷಿಕೋತ್ಸವ ಮತ್ತು ನಿಡುಮಾಮಿಡಿ ಶಾಖಾ ಮಠದ ಪಟ್ಟಾಧಿಕಾರ ಮಹೋತ್ಸವದಲ್ಲಿ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶಿವ ಸಂಸತಿ ದ್ರಾವಿಡ ಸಂಸತಿ . ದ್ರಾವಿಡ ಸಂಸತಿಯ ಜಲ ತತ್ವ ಆರಾಧಕರಾದ ವೀರಶೈವ ಲಿಂಗಾಯತ ಧಮೀರ್ಯರಿಗೆ ಯಜ್ಞ ಯಾಗಾದಿ ಹೋಮ ಹವನಗಳ ಆಚರಣೆ ಮೂಲ ಪರಂಪರೆಗೆ ಹೊರತಾದುದು ಎಂದು ಪ್ರತಿಪಾದಿಸಿದರು.
ಪಟ್ಟಾಧಿಕಾರ ಮಹೋತ್ಸವ:
ಶಿರಾ ನಗರದ ಚಂಗಾವರ ರಸ್ತೆಯಲ್ಲಿರುವ ಶ್ರೀ ಕಾಳಿಂಗಯ್ಯನ ಮಠದ 350ನೇ ವಾರ್ಷಿಕೋತ್ಸವ ಮತ್ತು ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಶಿವಾಯುತ ಶ್ರೀ ಕಾಳಿಂಗೇಶ್ವರ ಸ್ವಾಮಿಗಳಿಗೆ ಶಿರಾ ಶಾಖಾ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ಪಟ್ಟಾಧಿಕಾರ ನೀಡಲಾಯಿತು. ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಸಂಕ್ರಮಣ ಕಾಲಘಟ್ಟದಲ್ಲಿ ಸುದೀರ್ಘ ಇತಿಹಾಸವಿರುವ ಕಾಳಿಂಗಯ್ಯ ಮಠದ ಸಾರಥ್ಯ ವಹಿಸಿರುವ ಕಲಬುರಗಿ ಜಿಲ್ಲೆಯ ಕಮಲಾಪುರ ಹಿರೇಮಠ ಮೂಲದ ನೂತನ ಶ್ರೀಗಳಿಗೆ ಶುಭಹಾರೈಸಿದರು.
ನಿಡುಮಾಮಿಡಿ ಪೀಠದ ಜಗದ್ಗುರುಗಳಾದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅವರು ಶಿವಾಯತ ಕಾಳಿಂಗೇಶ್ವರ ಶ್ರೀಗಳಿಗೆ ಕಿರೀಟ ಧಾರಣೆ ಮಾಡಿ ಪಂಚ ಮುದ್ರಿಕೆಗಳನ್ನು ನೀಡಿ ಆಶೀರ್ವದಿಸಿದರು. ಗಂಗಾವತಿ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಹುಬ್ಬಳ್ಳಿಯ ನವನಗರದ ಡಾ.ರಾಜಶೇಖರ ಶಿವಾಚಾರ್ಯ, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಬಾಗಲಕೋಟೆಯ ಚಾಲುಕ್ಯ ಸಂಸತಿ ಅಧ್ಯಯನ ಪೀಠದ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಹಂಡೆ ರಾಜವಂಶದ ಅರಸರಿಗೆ ಮಾರ್ಗದರ್ಶನ ನೀಡಿದ ನಿಡುಮಾಮಿಡಿ ಪೀಠದ ಚಾರಿತ್ರಿಕ ಮಹತ್ವದ ಕುರಿತು ವಿವರಿಸಿದರು.
ಆಂಧ್ರಪ್ರದೇಶದ ಶ್ರೀಶೈಲಂ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕ ಪ್ರಸನ್ನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಲಿ, ಜಿಲ್ಲಾಧ್ಯಕ್ಷ ಡಾ.ಪರಮೇಶ್, ತುಮಕೂರಿನ ಸಾಹಿತಿ ಡಾ.ಬಿ.ನಂಜುಂಡಸ್ವಾಮಿ, ಮುಖಂಡರಾದ ತರೂರು ಬಸವರಾಜು, ಸಿ.ಎಸ್.ಪಲ್ಲವಿ, ಜಿ.ಆರ್.ನಟರಾಜು, ನಾಗರಾಜು ಇದ್ದರು.